ಬೆಂಗಳೂರು,ಅ.18(DaijiworldNews/AK): ಮೈಸೂರು ಮುಡಾ ನಿವೇಶನ ಹಂಚಿಕೆ ಹಗರಣವನ್ನು ಸಿಬಿಐಗೇ ಕೊಡಬೇಕು. ಹಾಗಿದ್ದರೆ ಮಾತ್ರ ಸತ್ಯಾಂಶ ಹೊರಬರಲು ಸಾಧ್ಯ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರತಿಪಾದಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ತನಿಖೆಯನ್ನು ಸಿಬಿಐಗೆ ಕೊಡದೆ ಇದ್ದಲ್ಲಿ ಕೇಸನ್ನು ಸಂಪೂರ್ಣವಾಗಿ ಮುಚ್ಚಿ ಹಾಕುವ ವ್ಯವಸ್ಥೆ ನಡೆಯುತ್ತಿದೆ ಎಂಬ ಅನುಮಾನವಿದೆ ಎಂದು ತಿಳಿಸಿದರು.
ಕಾಂಗ್ರೆಸ್ಸಿನವರಿಗೆ ಮಾನವೀಯತೆ ಇದ್ದರೆ ವಾಲ್ಮೀಕಿ ಜಯಂತಿಯನ್ನು ಪಶ್ಚಾತ್ತಾಪ ದಿನ ಎಂದು ಆಚರಣೆ ಮಾಡಬೇಕಿತ್ತು ಎಂದ ಅವರು, ಮುಖ್ಯಮಂತ್ರಿಗಳು ತಕ್ಷಣ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಎಲ್ಲ ಕಡತಗಳನ್ನು ಹೆಲಿಕಾಪ್ಟರ್ನಲ್ಲಿ ತುಂಬಿಕೊಂಡು ಬಂದವರನ್ನೂ ತನಿಖೆಗೆ ಒಳಪಡಿಸಿ ಎಂದು ಒತ್ತಾಯಿಸಿದರು.ಮುಖ್ಯಮಂತ್ರಿಗಳು ತಕ್ಷಣ ರಾಜೀನಾಮೆ ಕೊಡಬೇಕು; ಮಾನ್ಯ ಸುರೇಶ್ ಅವರೂ ರಾಜೀನಾಮೆ ನೀಡಬೇಕು ಎಂದು ಆಗ್ರಹವನ್ನು ಮುಂದಿಟ್ಟರು. ಇಲ್ಲವಾದರೆ ಇ.ಡಿ. ಅಧಿಕಾರಿಗಳು ಮುಖ್ಯಮಂತ್ರಿಗಳನ್ನು ಬಂಧಿಸಲಿ ಎಂದು ಮನವಿ ಮಾಡಿದರು.