ಥಾಣೆ,ಅ.19(DaijiworldNews/AK): ಒಂದೆರೆಡು ಸಲ ಪರೀಕ್ಷೆ ವಿಫಲಗೊಂಡರೆ ಜಿಗುಪ್ಸೆಗೊಳ್ಳುವವರೇ ಹೆಚ್ಚು. ಆದರೆ ಪ್ರಶಾಂತ್ ಸುರೇಶ್ ಭೋಜನೆ ಒಂದಲ್ಲ, ಎರಡಲ್ಲ ಬರೋಬ್ಬರಿ 9 ನೇ ಪ್ರಯತ್ನದಲ್ಲಿ ಯುಪಿಎಸ್ಸಿ CSE 2023 ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಅವರ ಕುತೂಹಲಕಾರಿ ಸ್ಟೋರಿ ಇಲ್ಲಿದೆ.
ಯಾವುದೇ ರೀತಿ ಕುಗ್ಗದೇ ಸತತ ಪ್ರಯತ್ನಗಳ ಮೂಲಕ ಪ್ರಶಾಂತ್ ಸುರೇಶ್ ಭೋಜನೆ ವಿಜಯ ಸಾಧಿಸಿದ್ದಾರೆ. ಪ್ರಶಾಂತ್ ಅವರ ತಂದೆ ತಾಯಿ ಥಾಣೆ ಮಹಾನಗರ ಪಾಲಿಕೆಯಲ್ಲಿ ಕನ್ಸರ್ವನ್ಸಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಪ್ರಶಾಂತ್ ಅವರು ಏಪ್ರಿಲ್ 16, 2024 ರಂದು ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆ 2023 ರ ಅಂತಿಮ ಫಲಿತಾಂಶಗಳಲ್ಲಿ ಅಖಿಲ ಭಾರತ ರ್ಯಾಂಕ್ (AIR) 849 ನೇ ರ್ಯಾಂಕ್ ಗಳಿಸಿದ್ದಾರೆ.
ಎಂಟು ವರ್ಷಗಳ ನಂತರ ತನ್ನ ಒಂಬತ್ತನೇ ಪ್ರಯತ್ನದಲ್ಲಿ ಅಂತಿಮವಾಗಿ ಪರೀಕ್ಷೆ ಗೆದ್ದ ಪ್ರಶಾಂತ್ ಸುರೇಶ್ ಭೋಜನೆ ನಿಜಕ್ಕೂ ತಾಳ್ಮೆ ಮತ್ತು ನಿರಂತರತೆಯ ಪ್ರತಿರೂಪವಾಗಿ ಇತರೆ ಸ್ಪರ್ಧಿಗಳಿಗೆ ನಿದರ್ಶನವಾಗಿದ್ದಾರೆ.
ನವಿ ಮುಂಬೈ ಕಾಲೇಜಿನ ಐಟಿ ಇಂಜಿನಿಯರ್ ಆಗಿರುವ ಭೋಜನೆ ಅವರು ನೌಪಾದಾದಲ್ಲಿನ ಸ್ಥಳೀಯ ಶಿಕ್ಷಣ ಸಂಸ್ಥೆಯಲ್ಲಿ ತಮ್ಮ ಮೂಲಭೂತ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.ಪ್ರಶಾಂತ್ ಎಂಜಿನಿಯರಿಂಗ್ ಪದವೀಧರನಾದರೂ, ಇವರಿಗೆ ಐಎಎಸ್ ಅಧಿಕಾರಿಯಾಗಬೇಕು ಕನಸಿತ್ತು. ಯುಪಿಎಸ್ಸಿ ಪ್ರಯಾಣದ ಸಮಯದಲ್ಲಿ, ಅವರು 2020 ರಲ್ಲಿ ದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೋಚಿಂಗ್ ಸೆಂಟರ್ನಲ್ಲಿ ಕೆಲಸ ಮಾಡಿದರು.
ಸತತ ಸೋಲು ಕಾಣುತ್ತಿದ್ದ ಪ್ರಶಾಂತ್ಗೆ ಪರೀಕ್ಷೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ ಮನೆಗೆ ಹಿಂತಿರುಗುವಂತೆ ಅವರ ಪೋಷಕರು ಕೇಳುತ್ತಲೇ ಇದ್ದರು.ಆದರೆ ಆತ್ಮವಿಶ್ವಾಸದಿಂದ ಮುಂದೊಂದು ದಿನ ಗುರಿಯನ್ನು ಸಾಧಿಸಿಯೇ ಸಾಧಿಸುತ್ತೇನೆಂದು ಗಟ್ಟಿ ನಿರ್ಧಾರ ಮಾಡಿ ಓದಲು ಶುರು ಮಾಡುತ್ತಿದ್ದರು. ಇದೀಗ ಪ್ರಾಶಂತ್ ಕನಸು ನನಸಾಗಿದೆ.