ಅಮರಾವತಿ, ಅ.26(DaijiworldNews/AA): ಆಂಧ್ರಪ್ರದೇಶದ ಮಾಜಿ ಸಿಎಂ ಹಾಗೂ ನನ್ನ ಸಹೋದರ ಜಗನ್ ಮೋಹನ್ ರೆಡ್ಡಿ ಕುಟುಂಬದ ಆಸ್ತಿಯಲ್ಲಿ ನನ್ನ ಪಾಲನ್ನು ನನಗೆ ಕೊಟ್ಟಿಲ್ಲ ಎಂದು ಅವರ ಸಹೋದರಿ ಹಾಗೂ ರಾಜ್ಯ ಕಾಂಗ್ರೆಸ್ನ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಆರೋಪ ಮಾಡಿದ್ದಾರೆ.
ವೈಎಸ್ಆರ್ ಅಭಿಮಾನಿಗಳಿಗೆ ಶರ್ಮಿಳಾ ಅವರು ಬರೆದ ಪತ್ರದಲ್ಲಿ ಈ ಬಗ್ಗೆ ಉಲ್ಲೇಖಿಸಿದ ಅವರು, ಜಗನ್ ಆಸ್ತಿಗಳ ಏಕೈಕ ಉತ್ತರಾಧಿಕಾರಿಯಲ್ಲ. ಕುಟುಂಬದ ಯಾವುದೇ ಆಸ್ತಿಯು ನ್ಯಾಯಸಮ್ಮತವಾಗಿ ತನಗೆ ಸೇರಿಲ್ಲ. ತಮ್ಮ ತಂದೆ ವೈ.ಎಸ್. ರಾಜಶೇಖರ ರೆಡ್ಡಿ (ವೈಎಸ್ಆರ್) ಅವರ ಜೀವಿತಾವಧಿಯಲ್ಲಾಗಲಿ ಅಥವಾ ಅವರ ನಿಧನದ ನಂತರ ಯಾವುದೇ ಆಸ್ತಿ ವರ್ಗಾವಣೆ ನಡೆದಿಲ್ಲ. ನನ್ನ ಮತ್ತು ನನ್ನ ಮಕ್ಕಳ ಪಾಲಿನ ಒಂದೇ ಒಂದು ಆಸ್ತಿಯನ್ನು ನಾನು ಇನ್ನೂ ಹೊಂದಿಲ್ಲ ಎಂದು ನಾನು ಘೋಷಿಸುತ್ತೇನೆ ತಿಳಿಸಿದ್ದಾರೆ.
ವೈಎಸ್ಆರ್ ಅವರ ಆಸ್ತಿ ಅವರ ನಾಲ್ವರು ಮೊಮ್ಮಕ್ಕಳಿಗೆ ಸಮಾನವಾಗಿ ಹಂಚಿಕೆಯಾಗಬೇಕು. ಆ ರೀತಿ ಹಂಚಿಕೆ ಮಾಡುವುದು ಜಗನ್ ಕರ್ತವ್ಯವಾಗಿದೆ. ಜಗನ್ ಮೋಹನ್ ರೆಡ್ಡಿ ಅವರು ತಮ್ಮ ಸ್ವಂತ ಆಸ್ತಿ ಎಂದು ಹೇಳಿಕೊಳ್ಳುವ ಆಸ್ತಿಗಳು ವಾಸ್ತವವಾಗಿ ಕುಟುಂಬದ ಆಸ್ತಿಗಳಾಗಿವೆ. ತಮ್ಮ ತಾಯಿ ವೈ.ಎಸ್.ವಿಜಯಮ್ಮ ಅವರು ಆಸ್ತಿ ಹಂಚಿಕೆಗಾಗಿ ನೂರಾರು ಪತ್ರಗಳನ್ನು ಬರೆದಿದ್ದಾರೆ. ಆದರೂ ಜಗನ್ ಅವರ ಕಲ್ಲು ಹೃದಯವನ್ನು ಕರಗಿಸಲು ಸಾಧ್ಯವಾಗಿಲ್ಲ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.