ಬೆಂಗಳೂರು, ಅ.26(DaijiworldNews/AA): ಬೇಲೆಕೇರಿ ಬಂದರಿನಿಂದ ಅದಿರು ಅಕ್ರಮ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ಗೆ 7 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ತೀರ್ಪು ನೀಡಿದೆ.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾಯ್ದಿರಿಸಿದ್ದ ಶಾಸಕ ಸತೀಶ್ ಸೈಲ್ ಮತ್ತು ಅಂದಿನ ಬಂದರು ಅಧಿಕಾರಿ ಮಹೇಶ್ ಬಿಳಿಯ ಸೇರಿ 7 ಮಂದಿಯ ಶಿಕ್ಷೆಯ ಪ್ರಮಾಣದ ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶನಿವಾರ ಪ್ರಕಟಿಸಿದೆ.
ಮೂರನೇ ಪ್ರಕರಣದಲ್ಲಿ ಈ ಶಿಕ್ಷೆ ಪ್ರಕಟಿಸಲಾಗಿದೆ. ಇದಲ್ಲದೆ ಉಳಿದ ಪ್ರಕರಣಗಳಲ್ಲಿಯೂ ಶಿಕ್ಷೆ ಪ್ರಮಾಣ ಹಾಗೂ ದಂಡ ಪ್ರಕಟಿಸಲಾಗಿದೆ. ಒಟ್ಟಾರೆಯಾಗಿ ಒಳಸಂಚಿಗೆ 5 ವರ್ಷ, ವಂಚನೆಗೆ 7 ವರ್ಷ, ಕಳ್ಳತನಕ್ಕೆ 3 ವರ್ಷ ಜೈಲು ಶಿಕ್ಷೆ ಪ್ರಕಟಿಸಲಾಗಿದೆ. ಅಲ್ಲದೆ ಒಟ್ಟು 9 ಕೋಟಿ 60 ಲಕ್ಷ ರೂ ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ.
ಇನ್ನು ಸತೀಶ್ ಸೈಲ್ ಅವರಿಗೆ ಎರಡು ವರ್ಷಕ್ಕಿಂತ ಹೆಚ್ಚಿನ ಶಿಕ್ಷೆ ಪ್ರಕಟವಾದ ಕಾರಣ ಅವರ ಶಾಸಕ ಸ್ಥಾನ ರದ್ದಾಗುವ ಸಾಧ್ಯತೆಯಿದೆ.