ಬೆಂಗಳೂರು,ಅ.30(DaijiworldNews/TA):ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ವಕ್ಫ್ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ಗೆ ಪತ್ರ ಬರೆದಿದ್ದಾರೆ. ಸಮಿತಿಯ ಮುಂದೆ ಸಾಕ್ಷಿಗಳಾಗಿ ರೈತರ ನಿಯೋಗವನ್ನು ಆಹ್ವಾನಿಸಬೇಕೆಂದು ಮನವಿ ಮಾಡಿದ್ದಾರೆ.
ಬರೆದಿರುವ ಪತ್ರ ಮತ್ತು ಅದಕ್ಕೆ ಸಂಬಂಧಿಸಿದ ವಿವರನ್ನು ತೇಜಸ್ವಿ ಸೂರ್ಯ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ವಿಜಯಪುರ ಜಿಲ್ಲೆ ಮತ್ತು ಕರ್ನಾಟಕದ ಸುತ್ತಮುತ್ತಲಿನ ಇತರ ಪ್ರದೇಶಗಳ ರೈತರಿಗೆ ಅವರ ಭೂಮಿಯನ್ನು ವಕ್ಫ್ ಆಸ್ತಿ ಎಂದು ತಪ್ಪಾಗಿ ನೋಟಿಸ್ ನೀಡಿರುವುದರ ಬಗ್ಗೆ ಗಮನ ಸೆಳೆಯಲಾಗಿದೆ ಎಂದು ಎಕ್ಸ್ ಸಂದೇಶದಲ್ಲಿ ತೇಜಸ್ವಿ ಸೂರ್ಯ ಉಲ್ಲೇಖ ಮಾಡಿದ್ದಾರೆ.
ಕಾನೂನು ಪ್ರಕ್ರಿಯೆಗಳನ್ನು ಅನುಸರಿಸದೆ ಕೆಲವು ಜಮೀನುಗಳ ಆರ್ಟಿಸಿ, ಪಹಣಿ ಮತ್ತು ಮ್ಯುಟೇಶನ್ ರಿಜಿಸ್ಟರ್ಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಸಮಿತಿಯ ಮುಂದೆ ಸಾಕ್ಷಿಗಳಾಗಿ ಈ ರೈತರ ನಿಯೋಗವನ್ನು ಆಹ್ವಾನಿಸಲು ಮತ್ತು ಈ ಸಮಸ್ಯೆಯ ಪ್ರಮಾಣವನ್ನು ನೇರವಾಗಿ ಅರ್ಥಮಾಡಿಕೊಳ್ಳಲು ಮನವಿ ಮಾಡಲಾಗಿದೆ ಎಂಬುವುದಾಗಿ ಎಕ್ಸ್ನಲ್ಲಿ ಉಲ್ಲೇಖ ಮಾಡಿದ್ದಾರೆ.
ರೈತರಿಗೆ ವಕ್ಫ್ ನೋಟಿಸ್ ವಿಚಾರ ಇದೀಗ ಬಹಳಷ್ಟು ಚರ್ಚೆಯಲ್ಲಿದೆ. ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ಸಿಡಿದೆದ್ದಿದೆ. ರೈತರಿಗೆ ವಕ್ಫ್ ಮಂಡಳಿಯಿಂದ ನೋಟಿಸ್ಗಳು ಬಂದಿವೆ.