ಹುಬ್ಬಳ್ಳಿ, ಅ.30(DaijiworldNews/AA): ರಾಜ್ಯದ ಯಾವುದೇ ಜಿಲ್ಲೆಯ ರೈತನ ಜಮೀನಿಗೆ ತೊಂದರೆಯಾಗಲ್ಲ. ವಕ್ಫ್ ಜಮೀನು ಸಂಬಂಧಿಸಿದಂತೆ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ವಕ್ಫ್ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ರಾಜ್ಯದಲ್ಲಿ ಮೂರು ಉಪ ಚುನಾವಣೆಗಳಿವೆ ಮತ್ತು ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಕಾಂಗ್ರೆಸ್ ವಿರುದ್ಧ ಆರೋಪ ಮಾಡಲು ವಿಷಯಗಳು ಇಲ್ಲದ ಕಾರಣ ಬಿಜೆಪಿ ನಾಯಕರು ರೈತರನ್ನು ಎತ್ತಿಕಟ್ಟುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಬಿಜೆಪಿ ನಾಯಕರ ಪ್ರತಿಭಟನೆ ಮಾಡೋದಾದರೆ ಮಾಡಲಿ. ಪಕ್ಷದ ಒಂದು ಸಮಿತಿ ರೈತರ ಸಮಸ್ಯೆ ಆಲಿಸಲು ಇವತ್ತು ವಿಜಯಪುರಕ್ಕೆ ಬರಲಿದೆ. ಅದರ ಸದಸ್ಯರು ಯಾವುದೇ ಕಾಗದಪತ್ರ ಕೇಳಿದರೂ ಕೊಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಜಿಲ್ಲಾಧಿಕಾರಿಯವರಿಗೆ ಆದೇಶ ನೀಡಿದ್ದಾರೆ ಎಂದು ಜಮೀರ್ ತಿಳಿಸಿದ್ದಾರೆ.