ಬೆಂಗಳೂರು, ಅ.30(DaijiworldNews/AK): ರಾಜ್ಯದಲ್ಲಿ ಕಾಂಗ್ರೆಸ್ಸಿನ ಓಲೈಕೆ ರಾಜಕಾರಣ ಮಿತಿಮೀರಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ತಿಳಿಸಿದರು.
ವಿಧಾನಪರಿಷತ್ತಿನ ನೂತನ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರ ವಿಧಾನಸೌಧದ 1ನೇ ಮಹಡಿಯ ಕೊಠಡಿ ಸಂಖ್ಯೆ 112ನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಡಿ.ವಿ.ಸದಾನಂದ ಗೌಡ ಅವರು, ರಾಜ್ಯದಲ್ಲಿ ಅಲ್ಪಸಂಖ್ಯಾತರ ತುಷ್ಟೀಕರಣ ಮಿತಿ ಮೀರಿದೆ. ವಕ್ಫ್ ಹೆಸರಿನಲ್ಲಿ ರೈತರಿಗೆ ಅನ್ಯಾಯವಾಗುತ್ತಿದ್ದು, ಯಾವೊಬ್ಬ ಸಣ್ಣ- ದೊಡ್ಡ ರೈತರಿಗೂ ಅನ್ಯಾಯ ಆಗಲು ಬಿಜೆಪಿ ಬಿಡುವುದಿಲ್ಲ ಎಂದು ತಿಳಿಸಿದರು.
ಕೇಂದ್ರದಲ್ಲಿ ಇವತ್ತು ವಕ್ಫ್ ಕಾಯಿದೆ ಜಾರಿಗೊಳಿಸುವ ಮುಖಾಂತರ ಇಡೀ ದೇಶದಲ್ಲಿ ಒಂದು ಸಮುದಾಯದಿಂದ ಜನರಿಗೆ ಆದ ಅನ್ಯಾಯವನ್ನು ಸರಿಪಡಿಸುವ ಪ್ರಯತ್ನವನ್ನು ಸನ್ಮಾನ್ಯ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆಯುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.
ಕಿಶೋರ್ ಕುಮಾರ್ ಪುತ್ತೂರು ಅವರ ಗೆಲುವಿನ ಮೂಲಕ ಬಿಜೆಪಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅತ್ಯಂತ ಗಟ್ಟಿಯಾಗಿ ತನ್ನ ಶಕ್ತಿ ಪ್ರದರ್ಶನ ಮಾಡಿದೆ ಎಂದು ವಿಶ್ಲೇಷಿಸಿದರು. ಪಕ್ಷದ ಅಧ್ಯಕ್ಷರು, ಶಾಸಕರು ಮತ್ತು ಕಾರ್ಯಕರ್ತರು ಮಾಡಿದ ಸಾಮೂಹಿಕ ಪ್ರಯತ್ನದಿಂದ ಈ ಗೆಲುವು ಸಾಧ್ಯವಾಗಿದೆ ಎಂದರು. ಕಿಶೋರ್ ಕುಮಾರ್ ಅವರ ಕುಟುಂಬವು ಪಕ್ಷ ನಿಷ್ಠೆ ಹೊಂದಿದೆ ಎಂದು ವಿವರಿಸಿದರು. ಗೂಂಡಾ ರಾಜಕೀಯ ಮಾಡುತ್ತಿದ್ದ ಕಾಂಗ್ರೆಸ್ಸಿಗರ ವಿರುದ್ಧ ಸೆಟೆದು ನಿಂತ ಕುಟುಂಬ ಅವರದು ಎಂದು ತಿಳಿಸಿದರು.
ಶಾಸಕ ಹರೀಶ್ ಪೂಂಜ ಅವರು ಮಾತನಾಡಿ, ವಕ್ಫ್ ಸಮಸ್ಯೆ ಸಂಬಂಧ ವಿಜಯಪುರಕ್ಕೆ ಮಾಜಿ ಡಿಸಿಎಂ ಗೋವಿಂದ ಕಾರಜೋಳರ ನೇತೃತ್ವದ ನಿಯೋಗ ಭೇಟಿ ಕೊಟ್ಟಿದೆ. ಆ ಸಂದರ್ಭದಲ್ಲಿ ಕಂಡುಕೊಂಡ ವಿಷಯಗಳನ್ನು ನೋಡಿದಾಗ ಇದು ಪೂರ್ಣವಾಗಿ ನಮ್ಮ ರಾಜ್ಯದ ಅಲ್ಪಸಂಖ್ಯಾತರ ಇಲಾಖೆ ಸಚಿವ ಜಮೀರ್ ಅಹ್ಮದ್ ಮತ್ತು ಅವರ ಚೇಲಾಗಳ ಷಡ್ಯಂತ್ರದ ವ್ಯವಸ್ಥೆ ಎಂಬುದು ಗೊತ್ತಾಗಿದೆ ಎಂದು ವಿಶ್ಲೇಷಿಸಿದರು.
ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಜಮೀರ್ ಅಹ್ಮದ್ ಅವರು ಜಿಲ್ಲಾವಾರು ಅದಾಲತ್ ಮಾಡಿದ್ದಾರೆ. 1974ರ ವಕ್ಫ್ ಗಜೆಟ್ ಅಧಿಸೂಚನೆಯಲ್ಲಿ ಇರುವ ಸರ್ವೇ ನಂಬರ್ಗಳನ್ನು ಪಹಣಿ ಮಾಡುವ ಹಿನ್ನೆಲೆಯಲ್ಲಿ ಅದಾಲತ್ ನಡೆಸಲಾಗಿತ್ತು ಎಂಬುದು ತಿಳಿದು ಬಂದಿದೆ ಎಂದು ವಿವರಿಸಿದರು.
ಇದು ಜಿಲ್ಲಾಧಿಕಾರಿಗಳ ಸಭಾ ನಡಾವಳಿಯಲ್ಲಿ ಗೊತ್ತಾಗಿದೆ ಎಂದರು. ಜಮೀರ್ ಅಹ್ಮದ್ ಅವರು ಭೂಮಾಫಿಯಗಳ ಜೊತೆ ಅನೌಪಚಾರಿಕ ಮಾತುಕತೆ ನಡೆಸಿದ ಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯದ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್, ಶಾಸಕರಾದ ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.