ಬೆಂಗಳೂರು, ಅ.30(DaijiworldNews/AK): ಅಧಿಕಾರಕ್ಕೆ ಬಂದು 500 ದಿನವಾದರೂ ಚನ್ನಪಟ್ಟಣ, ರಾಮನಗರಕ್ಕೆ ಬಾರದ ಮುಖ್ಯಮಂತ್ರಿಗಳು ನಾನು ಚನ್ನಪಟ್ಟಣವನ್ನು ಉದ್ಧಾರ ಮಾಡುತ್ತೇನೆ ಎಂದು ಹೇಳಿದರೆ ನಂಬಲು ಸಾಧ್ಯವೇ? ಸಾಧ್ಯವೇ ಇಲ್ಲ ಅಲ್ಲವೇ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಪ್ರಶ್ನಿಸಿದರು.
ಚನ್ನಪಟ್ಟಣದ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಡಿ.ಕೆ.ಶಿವಕುಮಾರ್ ಇಲ್ಲಿ ಚುನಾವಣೆಗೆ ನಿಲ್ಲುವುದಾಗಿ ಹೇಳಿದ್ದರು. ಜನರೂ ಅದೇರೀತಿ ಭಾವಿಸಿದ್ದರು. ಈಗ ಕೈಕೊಟ್ಟ ಅನ್ನಬೇಕಲ್ಲವೇ? ಕೈಕೊಟ್ಟು ಹೋದವರಿಗೆ ಮತ ಕೊಡಬೇಕೇ ಎಂದು ಯೋಚಿಸಿ ಎಂದು ತಿಳಿಸಿದರು.
ಸರಕಾರದ ಅವಧಿ ಈಗಾಗಲೇ ಸುಮಾರು 2 ವರ್ಷ ಮುಗಿದಿದೆ. ಸರಕಾರ ಇದ್ದರೆ 3 ವರ್ಷ ಆಯುಸ್ಸಿದೆ. ಮುಡಾ ಮತ್ತಿತರ ಹಗರಣದಿಂದ ಹೆಚ್ಚು ಕಮ್ಮಿ ಆದರೆ ಇನ್ನೊಂದು ವರ್ಷಕ್ಕೆ ಚುನಾವಣೆ ಬರಬಹುದು; ಮುಳುಗಿ ಹೋಗುವ, ಬಿದ್ದು ಹೋಗುವ ಕಾಂಗ್ರೆಸ್ಸಿಗೆ ಮತ ಕೊಟ್ಟರೆ ಏನು ಉಪಯೋಗವಿದೆ? ಕಾರ್ಯಕರ್ತರೆಲ್ಲರೂ ಇದನ್ನು ಜನಕ್ಕೆ ತಿಳಿಸಿ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಮುಖ್ಯಮಂತ್ರಿ ಬಡವರಿಗೆ ನಿವೇಶನ ಕೊಡುವ ಬದಲು ಕುಟುಂಬಕ್ಕೆ ಸೈಟ್ ಕೊಡಿಸಿ ಸಿಕ್ಕಿ ಹಾಕಿಕೊಂಡಿದ್ದಾರೆ. ಮುಡಾದಲ್ಲೂ ಲೂಟಿ, ವಾಲ್ಮೀಕಿ ನಿಗಮದಲ್ಲೂ ಲೂಟಿ ಮಾಡಿದ ಲೂಟಿಕೋರ ಸರಕಾರವನ್ನು ಬೆಂಬಲಿಸಬೇಡಿ. ಅದರಿಂದ ಲೂಟಿಕೋರರಿಗೆ ಸರ್ಟಿಫಿಕೇಟ್ ಕೊಟ್ಟಂತಾಗಲಿದೆ ಎಂದು ಎಚ್ಚರಿಸಿದರು.ಬಿಜೆಪಿ ಅವಧಿಯ ಸರಕಾರದಲ್ಲಿ ಆದ ಅಭಿವೃದ್ಧಿ ಮತ್ತು ಕಾಂಗ್ರೆಸ್ಸಿನ ಅಭಿವೃದ್ಧಿ ಶೂನ್ಯತೆ ಬಗ್ಗೆ ಚರ್ಚೆಗೆ ನಾವು ಸಿದ್ಧ ಎಂದು ಅವರು ಸವಾಲೆಸೆದರು.