ಬೆಂಗಳೂರು, ಅ.30(DaijiworldNews/AA): ತಮ್ಮನ್ನು ಬ್ಲ್ಯಾಕ್ಮೇಲರ್ ಅಂತ ಕರೆದಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಕೀಲ, ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ವಿಶೇಷ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟಿಜೆ ಅಬ್ರಾಹಾಂ, ಸಿದ್ದರಾಮಯ್ಯ ಅವರು ನನ್ನ ವಿರುದ್ಧ ಸೇಡು ತೀರಿಸಿಕೊಳ್ಳುವ ಉತ್ಸಾಹದಲ್ಲಿ ಕೆಲವು ಬಹಿರಂಗ ಹೇಳಿಕೆಗಳನ್ನು ನೀಡಿದ್ದಾರೆ. ಅವರು ನನ್ನನ್ನು ಬ್ಲ್ಯಾಕ್ಮೇಲರ್ ಎಂದು ಕರೆದಿದ್ದೀರಿ. ಹೀಗಾಗಿ ನಿಮ್ಮ ವಿರುದ್ಧ ಮಾನನಷ್ಟ ಮೊಕದಮ್ಮೆ ದಾಖಲಿಸಿದ್ದೇನೆ ಎಂದು ತಿಳಿಸಿದ್ದಾರೆ.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಅನುಮತಿ ನೀಡುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಟಿಜೆ ಅಬ್ರಹಾಂ ಸಲ್ಲಿಸಿದ್ದ ಅರ್ಜಿಯನ್ನು ಆಧರಿಸಿ ರಾಜ್ಯಪಾಲರು ಜುಲೈ 26ರಂದು ಮುಖ್ಯಮಂತ್ರಿಗೆ ನೋಟಿಸ್ ಜಾರಿ ಮಾಡಿದ್ದರು. ನಿಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ 7 ದಿನಗಳೊಳಗೆ ಉತ್ತರ ನೀಡುವಂತೆ ರಾಜ್ಯಪಾಲರು ಹೇಳಿದ್ದರು.
ಈ ವಿಚಾರವಾಗಿ ಆಗಸ್ಟ್ 2ರಂದು ಮಾಧ್ಯಮದವರೊಂದಿಗೆ ಮಾತನಾಡಿದ್ದ ಸಿದ್ದರಾಮಯ್ಯ, ಟಿ.ಜೆ.ಅಬ್ರಹಾಂ ಅವರ ಪೂರ್ವಾಪರ ನೋಡಿದರೆ ಅವರೊಬ್ಬ ಬ್ಲ್ಯಾಕ್ಮೇಲರ್. ಅವರ ದೂರಿನ ಮೇರೆಗೆ ಕ್ರಮ ಕೈಗೊಳ್ಳುವುದು ಕಾನೂನು ಬಾಹಿರ. ಈ ರೀತಿ ಹಲವರ ವಿರುದ್ಧ ದೂರು ನೀಡುತ್ತಿದ್ದಾರೆ. ನಾನು ಅಂತಹ ಯಾವುದೇ ಅಪರಾಧ ಮಾಡಿಲ್ಲ ಎಂದಿದ್ದರು.
ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಟಿಜೆ ಅಬ್ರಾಹಂ, ಸಿದ್ದರಾಮಯ್ಯ ಅವರ ಹೇಳಿಕೆಯಿಂದ ನನಗೆ ನೋವಾಗಿದೆ ಮತ್ತು ಮಾನಹಾನಿಯಾಗಿದೆ. ನನ್ನನ್ನು ಬ್ಲ್ಯಾಕ್ಮೇಲರ್ ಎಂದು ಕರೆದಿದ್ದಕ್ಕಾಗಿ ಲೀಗಲ್ ನೋಟಿಸ್ ನೀಡುತ್ತೇನೆ ಎಂದು ಹೇಳಿದ್ದರು.