ಬೆಂಗಳೂರು, ಅ.31(DaijiworldNews/AA): ರಾಜ್ಯದ ಕಾಂಗ್ರೆಸ್ ನಾಯಕರು, ಮುಖಂಡರು ಒಗ್ಗಟ್ಟಾಗಿರಬೇಕು. ವಿಘ್ನ ಸಂತೋಷ ಶಾಶ್ವತವಲ್ಲ, ನಿಮ್ಮ ಒಗ್ಗಟ್ಟಿನಲ್ಲೇ ಬಲವಿದೆ, ಸಂತೋಷವಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುದ್ಧಿಮಾತು ಹೇಳಿದ್ದಾರೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಪಕ್ಷದ ಒಬ್ಬ ನಾಯಕನಿಗೆ ಸಮಸ್ಯೆಯಾದಾಗ ಬೇರೆ ನಾಯಕರು ಸಂತೋಷಟ್ಟರೆ ಸಂಘಟನೆಯನ್ನು ಮುರಿಯಲು ಹೊರಗಿನವರ ಅವಶ್ಯಕತೆಯೇ ಇರಲ್ಲ ಎಂದು ತಿಳಿಸಿದರು.
ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಯಾರೂ ಜೈಕಾರ ಹಾಕುತ್ತಿರಲಿಲ್ಲ, ಅದರೂ ಅವರು ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ ರಾಜ್ಯವನ್ನು ಅದ್ಭುತವಾಗಿ ಮುನ್ನಡೆಸಿದರು, ಅವರನ್ನು ಪಕ್ಷ ಬಿಟ್ಟು ಹೋಗುವಂತೆ ಯಾರೂ ಹೇಳಿರಲಿಲ್ಲ ಅವರಾಗೇ ಹೋದರು, ಪಕ್ಷದಲ್ಲೇ ಉಳಿದಿದ್ದರೆ ಇನ್ನೈದು ವರ್ಷಗಳ ಸಿಎಂ ಆಗಿ ಮುಂದುವರಿಯುತ್ತಿದ್ದರು ಎಂದರು.