ಬೆಂಗಳೂರು,ಅ.31(DaijiworldNews/AK): ಜಮೀರ್ ಅಹ್ಮದ್ ಮತ್ತು ಅವರ ಕಾಂಗ್ರೆಸ್ಸಿನ ತಂಡ, ಸಿದ್ದರಾಮಯ್ಯನವರು ಅನ್ನದಾತನಿಗೆ ಕನ್ನ ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆರೋಪಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ವಕ್ಫ್ ಬೋರ್ಡ್ ಹೆಸರಿನಲ್ಲಿ ಕಬಳಿಕೆಯಾದ ರೈತರ ಜಮೀನು ವಾಪಸ್ ಲಭಿಸಿ ಸಂತಸದಿಂದ ದೀಪಾವಳಿ ಆಚರಿಸುವಂತಾಗಲಿ ಎಂದು ಆಶಿಸಿದರು.
ರೈತರ ಪಹಣಿಗಳಲ್ಲಿ ವಕ್ಫ್ ಜಮೀನು ಎಂದು ನಮೂದಿಸಿದ್ದು, ಅನ್ನದಾತನಿಗೆ ಕನ್ನ ಹಾಕುವ ಕೆಲಸವನ್ನು ಜಮೀರ್ ಅಹ್ಮದ್ ಮತ್ತು ಅವರ ಕಾಂಗ್ರೆಸ್ಸಿನ ತಂಡ, ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ. ಕಾಂಗ್ರೆಸ್ಸಿನವರು ಮತ್ತು ಸಿದ್ದರಾಮಯ್ಯನವರಿಗೆ ಮುಸ್ಲಿಮರ ಭೂತ ಹಿಡಿದಿದೆ. ಹುಣಿಸೆ ಬರಲು ತೆಗೆದುಕೊಂಡು ದೆವ್ವ ಬಿಡಿಸುವ ವರೆಗೂ ಬಿಜೆಪಿಯ ನಾವೆಲ್ಲರೂ ರೈತರ ಪರವಾಗಿ ಇರುತ್ತೇವೆ ಎಂದು ತಿಳಿಸಿದರು.
ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಸಮಸ್ಯೆ ಆರಂಭವಾಗಿದ್ದು, ಕೋಲಾರದಲ್ಲೂ ದೇವಸ್ಥಾನದ ಜಮೀನನ್ನು ವಕ್ಫ್ ಬೋರ್ಡ್ ಜಮೀನೆಂದು ನಮೂದಿಸಿದ ಮಾಹಿತಿ ಇದೆ. ನಗರಸಭೆ ಆಸ್ತಿಗಳು, ಮನೆಗಳನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಿಸಿದ್ದಾರೆ; ರೈತರ ಜಮೀನುಗಳನ್ನು ವಕ್ಫ್ ಬೋರ್ಡ್ ಆಸ್ತಿಯಾಗಿ ಪಹಣಿಯಲ್ಲಿ ತಿಳಿಸಿದ್ದಾಗಿ ವಿವರಿಸಿದರು.
ಮಂಡ್ಯದ ನಾಗಮಂಗಲ, ರಾಮನಗರ ಜಿಲ್ಲೆಯ ಚನ್ನಪಟ್ಟಣ, ಹುಬ್ಬಳ್ಳಿ, ಬೆಳಗಾವಿ ಸೇರಿ ಎಲ್ಲೆಡೆ ಜನರಿಗೆ ಗೊತ್ತಿಲ್ಲದೆ ಯಾಮಾರಿಸುವ, ನುಸುಳುಕೋರರಂತೆ ವಕ್ಫ್ ಬೋರ್ಡ್ ಕೆಲಸ ಮಾಡುತ್ತಿರುವಂತಿದೆ. ಎಲ್ಲ ಪಹಣಿಗಳಲ್ಲಿ ವಕ್ಫ್ ಬೋರ್ಡ್ ಎಂದು ತಿದ್ದಿ ಅನ್ಯಾಯ ಮಾಡುವುದರ ವಿರುದ್ಧ ನವೆಂಬರ್ 4ರಂದು ಬಿಜೆಪಿ ತೀವ್ರ ರೀತಿಯ ಹೋರಾಟ ನಡೆಸಲಿದೆ ಎಂದು ಪ್ರಕಟಿಸಿದರು.ವಕ್ಫ್ ವಿಚಾರದಲ್ಲಿ ಸರಕಾರವೇ ಭೂಕಬಳಿಕೆದಾರ ಎಂದು ಆಕ್ಷೇಪಿಸಿದರು.