ಬೆಂಗಳೂರು, ಅ.31(DaijiworldNews/AA): ಬಿಪಿಎಲ್ ಗ್ರೂಪ್ನ ಸಂಸ್ಥಾಪಕರಾದ ಟಿ.ಪಿ. ಗೋಪಾಲನ್ ನಂಬಿಯಾರ್(94) ಅವರು ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನಲ್ಲಿರುವ ತಮ್ಮ ಸ್ವಗೃಹದಲ್ಲಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಟಿಪಿಜಿ ಎಂದೇ ಖ್ಯಾತರಾಗಿದ್ದ ಟಿ.ಪಿ. ಗೋಪಾಲನ್ ನಂಬಿಯಾರ್ ಅವರು ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರ ಮಾವ. ಅವರು ಸಂಸ್ಥಾಪಿಸಿದಂತಹ ಬಿಪಿಎಲ್ ಗ್ರೂಪ್ ಒಂದು ಕಾಲದಲ್ಲಿ ಭಾರತದ ಪ್ರಮುಖ ಬಿಸಿನೆಸ್ ಗ್ರೂಪ್ಗಳಲ್ಲಿ ಒಂದೆನೆನಿಸಿತ್ತು.
ಗೋಪಾಲನ್ ನಂಬಿಯಾರ್ ನಿಧನಕ್ಕೆ ಪಿಎಂ ನರೇಂದ್ರ ಮೋದಿ, ರಾಜೀವ್ ಚಂದ್ರಶೇಖರ್, ಕರ್ನಾಟಕದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಲವರು ಸಂತಾಪ ಸೂಚಿಸಿದ್ದಾರೆ.
ಶ್ರೀ ಟಿಪಿಜಿ ನಂಬಿಯಾರ್ ಅವರು ಪ್ರಮುಖ ಉದ್ಯಮಿಯಾಗಿದ್ದರು. ಭಾರತವನ್ನು ಆರ್ಥಿಕವಾಗಿ ಬಲಿಷ್ಠ ಮಾಡುವ ಹೆಬ್ಬಯಕೆ ಹೊಂದಿದ್ದರು. ಅವರು ಇಹಲೋಕ ಬಿಟ್ಟು ಹೋಗಿರುವುದು ನೋವು ತಂದಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪ ಹೇಳಬಯಸುತ್ತೇನೆ, ಎಂದು ನರೇಂದ್ರ ಮೋದಿ ತಮ್ಮ ಎಕ್ಸ್ ಪೋಸ್ಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.