ರಾಮನಗರ, ಅ.31(DaijiworldNews/AK): ರಾಜ್ಯ ಮಹಿಳೆಯರಿಗೆ ಉಚಿತ ಬಸ್ ಸಾರಿಗೆ ಸೌಲಭ್ಯ ಒದಗಿಸಲಾಗಿರುವ ಶಕ್ತಿ ಯೋಜನೆಯನ್ನು ಸ್ಥಗಿತ ಇಲ್ಲವೇ ಮರು ಪರಿಶೀಲನೆ ಮಾಡುವ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ವಿರುದ್ಧ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಮಾತನಾಡಿದ ಅವರು, ಒಂದೊಂದಾಗಿ 5 ಗ್ಯಾರಂಟಿಗಳನ್ನು ನಿಲ್ಲಿಸಲು ಇದೊಂದು ಮೊದಲ ಹೆಜ್ಜೆ ಅಷ್ಟೇ. ಇನ್ನು ಕೆಲವೇ ದಿನಗಳಲ್ಲಿ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ ಕಾರ್ಯಕ್ರಮಗಳನ್ನು ನಿಲ್ಲಿಸಲಿದ್ದಾರೆ. ಅದಕ್ಕೆ ಇವರು ಮರು ಪರಿಶೀಲನೆ ಎಂಬ ಪೀಠಿಕೆ ಹಾಕಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಮಹಿಳೆಯರು ಶಕ್ತಿ ಯೋಜನೆಯನ್ನು ನಿಲ್ಲಿಸಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಅಥವಾ ಮಹಿಳೆಯರು ಆರ್ಥಿಕವಾಗಿ ಬಲಾಢ್ಯರಾಗಿದ್ದಾರೆ ಎಂದು ಇವರಿಗೆ ಹೊಸ ಜ್ಞಾನೋದಯ ಆಗಿದೆಯಾ? ಶಕ್ತಿ ಯೋಜನೆಯ ಮರು ಪರಿಶೀಲನೆಯ ನಾಟಕ ಗ್ಯಾರಂಟಿಗಳನ್ನು ಒಂದೊಂದಾಗಿಯೇ ತೆಗೆಯಲು ಮೊದಲ ಹಂತದ ಪ್ರಕ್ರಿಯೆ ಎಂದೇ ಭಾವಿಸಬೇಕಾಗುತ್ತದೆ. ಇದು ಗ್ಯಾರಂಟಿ ನಿಲ್ಲಿಸಲು ಒಂದು ಪೀಠಿಕೆ ಮಾತ್ರ ಎಂದು ವಾಗ್ದಾಳಿ ನಡೆಸಿದರು.