ಬೆಂಗಳೂರು, ನ.01(DaijiworldNews/AA): ಕರ್ನಾಟಕಕ್ಕೆ 15ನೇ ಹಣಕಾಸಿನ ಆಯೋಗದಲ್ಲಿ ಆದ ಅನ್ಯಾಯವನ್ನು ಕೇಂದ್ರ ಸರ್ಕಾರ ಸರಿಪಡಿಸಿಲ್ಲ. ಕೇಂದ್ರದ ಅನುದಾನದ ವಿಚಾರದಲ್ಲಿ ಕರ್ನಾಟಕಕ್ಕೆ ತಾರತಮ್ಯ ಆಗಿದೆ ಎಂದು ಕೆಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
69ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆಗುತ್ತಿದೆ. ಆದರೂ ನಾವು ಶಾಲಾ ಕಾಲೇಜು ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ. ವಾರಕ್ಕೆ 6 ದಿನ ವಿದ್ಯಾರ್ಥಿಗಳಿಗೆ ಮೊಟ್ಟೆ ಕೊಡುವ ಕೆಲಸ ಮಾಡುತ್ತಿದ್ದೇವೆ. ಪ್ರತಿ ದಿನ 57 ಲಕ್ಷ ಮಕ್ಕಳಿಗೆ ಮೊಟ್ಟೆ ನೀಡುತ್ತಿದ್ದೇವೆ. ಸಾಯಿ ಅನ್ನಪೂರ್ಣ ಟ್ರಸ್ಟ್ ವಾರದಲ್ಲಿ 3ದಿನ ರಾಗಿ ಮಾಲ್ಟ್ ನೀಡುತ್ತಿದೆ. ಅಪೌಷ್ಟಿಕತೆ ದೂರ ಮಾಡಲು ಪೌಷ್ಟಿಕಾಂಶಯುಕ್ತ ಆಹಾರ ನೀಡಲಾಗುತ್ತಿದೆ. ಅಪೌಷ್ಟಿಕತೆ ದೂರ ಮಾಡಲು ಸಾಕಷ್ಟು ಯೋಜನೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ನಾವು ರಾಜ್ಯಕ್ಕೆ ನ್ಯಾಯಯುತವಾಗಿ ತೆರಿಗೆ ಪಾಲು ಕೊಡಿ ಎಂದು ಕೇಳುತ್ತಿದ್ದೇವೆ. ನಮ್ಮ ಹಕ್ಕು ರಕ್ಷಣೆ ಮಾಡಿಕೊಳ್ಳುವ ಯತ್ನ ಮಾಡಬೇಕಾಗಿದೆ. ರಾಜ್ಯದಿಂದ ಆಯ್ಕೆಯಾದ ಎಂಪಿಗಳು ಲೋಕಸಭೆಯಲ್ಲಿ ಧ್ವನಿ ಎತ್ತಬೇಕಿದೆ. ರಾಜ್ಯಸಭಾ ಸದಸ್ಯರೂ ತೆರಿಗೆ ಪಾಲು ಕೊಡಿ ಎಂದು ಕೇಳಬೇಕು. ಆ ರೀತಿಯ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
15ನೇ ಹಣಕಾಸು ಆಯೋಗದಿಂದ ನಮ್ಮ ರಾಜ್ಯಕ್ಕೆ ಅನ್ಯಾಯ ಆಯಿತು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶಾಲಾ ಮಕ್ಕಳಿಗೆ ಯೋಜನೆಗಳನ್ನು ರೂಪಿಸಿದ್ದಾರೆ. ವಾರದಲ್ಲಿ ಆರು ದಿನ ಮೊಟ್ಟೆ ಕೊಡುತ್ತೇವೆ. ಚಿಕ್ಕಿ, ಬಾಳೆ ಹಣ್ಣು ಕೊಡುತ್ತಿದ್ದೇವೆ. ದಿನ 57 ಲಕ್ಷ ಮಕ್ಕಳಿಗೆ ಮೊಟ್ಟೆ ಕೊಡುತ್ತಿದ್ದೇವೆ. ನಮ್ಮ ದೇಶದಲ್ಲಿ ಬಡತನ ಇದೆ, ಬಡವರ ಮಕ್ಕಳಲ್ಲಿ ಅಪೌಷ್ಟಿಕತೆ ಇದೆ. ಹೀಗಾಗಿ ಗುಣಮಟ್ಟದ ಆಹಾರ ಸಿಗಬೇಕು ಎಂದು ಕಾರ್ಯಕ್ರಮ ಜಾರಿ ಮಾಡಿದ್ದೇವೆ ಎಂದು ಹೇಳಿದರು.