ನವದೆಹಲಿ, ನ.01(DaijiworldNews/AA): ನವೆಂಬರ್ ಬಳಿಕ ಗ್ಯಾರಂಟಿಗಳಿಗೆ ಜನ ಗಣ ಮನ ಹಾಡುತ್ತಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಶಕ್ತಿ ಯೋಜನೆ ಪರಿಷ್ಕರಣೆ ಬಗ್ಗೆ ಡಿಸಿಎಂ ಡಿಕೆಶಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಗಾಗಿ ಮಾಡುವ ಘೋಷಣೆ ಎಷ್ಟರ ಮಟ್ಟಿಗೆ ತೊಂದರೆ ಕೊಡುತ್ತವೆ ಎನ್ನುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಗ್ಯಾರಂಟಿಗಳೇ ಸಾಕ್ಷಿ. ರಾಜ್ಯ ಸರ್ಕಾರದ ಈ ತೊಳಲಾಟವನ್ನು ಬಹಿರಂಗವಾಗಿ ಹೇಳಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ನಾನು ಅಭಿನಂದಿಸುತ್ತೇನೆ ಎಂದರು.
ಕಾಸಿಲ್ಲದೇ ಕರಿಮಣಿ ಹೊಲಿಸಿಕೊಂಡಿದ್ದಾರೆ. ಕೂಸು ಹುಟ್ಟುವ ಮುನ್ನ ಕುಲಾಯಿ ಹೊಲಿಸಿಕೊಂಡ ಹಾಗೇ ಈ ಗ್ಯಾರಂಟಿ ಯೋಜನೆಗಳು. ಚುನಾವಣೆಗಾಗಿ ಗ್ಯಾರಂಟಿ ನೀಡಿ ಈಗ ಪರಿತಪಿಸುತ್ತಿದ್ದಾರೆ. ದೇಶದ ವ್ಯವಸ್ಥೆಯಲ್ಲಿ, ರಾಜ್ಯದ ಪಾಲುದಾರಿಕೆಯಲ್ಲಿ ಇತಿಮಿತಿಯಲ್ಲಿ ಸರ್ಕಾರ ನಡೆಸಬೇಕು. ಸಿಎಂ ಸಿದ್ದರಾಮಯ್ಯ, ಎಲ್ಲ ಮಂತ್ರಿಗಳು ಮತ್ತು ಕಾಂಗ್ರೆಸ್ ಎಲ್ಲ ನಾಯಕರ ಭಾವನೆಯೂ ಇದೆ ಆಗಿದೆ. ಹೊಟ್ಟೆಯಲ್ಲಿರುವ ನೋವನ್ನು ಡಿಕೆಶಿ ಹೇಳಿಕೊಂಡಿದ್ದಾರೆ ಎಂದು ತಿಳಿಸಿದರು.
ನವೆಂಬರ್ ಬಳಿಕ ಗ್ಯಾರಂಟಿಗಳಿಗೆ ಜನ ಗಣ ಮನ ಹಾಡುತ್ತಾರೆ. ರಾಜ್ಯ ಕಾಂಗ್ರೆಸ್ ನಾಯಕರ ಬಣ, ರಾಜಕೀಯ ಹಿನ್ನೆಲೆ ಕುರಿತು ಕಾಂಗ್ರೆಸ್ ನಾಯಕರ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಹಿರಂಗ ಟೀಕೆ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿ, ಖರ್ಗೆ ಅವರು ಹಿರಿಯ ರಾಜಕಾರಣಿ, ಅವರ ಅನುಭವ ಹಂಚಿಕೊಂಡಿದ್ದಾರೆ. ಆದರೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕೈಯಿಂದ ಆಗದ ಕೆಲಸ ಖರ್ಗೆ ಅವರಿಂದ ಆಗುತ್ತಾ? ಇದನ್ನು ನೀವೇ ಯೋಚನೆ ಮಾಡಬೇಕು. ಖರ್ಗೆ ಅವರು ಏನೇ ಹೇಳಿದರೂ ನಾಯಿ ಬಾಲ ಡೊಂಕು ಎಂದರು.