ನವದೆಹಲಿ, ನ.01(DaijiworldNews/AK):ರಾಜೇಶ್ ಕುಮಾರ್ ಸಿಂಗ್ ಅವರು ನವದೆಹಲಿಯ ಸೌತ್ ಬ್ಲಾಕ್ನಲ್ಲಿ ರಕ್ಷಣಾ ಕಾರ್ಯದರ್ಶಿಯಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅರ್ಮಾನಿ ಗಿರ್ಧರ್ ಅವರ ನಿವೃತ್ತಿಯ ಬಳಿಕ ರಾಜೇಶ್ ಕುಮಾರ್ ಸಿಂಗ್ ನೂತನ ರಕ್ಷಣಾ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು.
ರಾಜೇಶ್ ಕುಮಾರ್ ಸಿಂಗ್ ಅವರು ಕೇರಳ ಕೇಡರ್ನ 1989-ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದರು. ಆಗಸ್ಟ್ 20, 2024 ರಿಂದ ವಿಶೇಷ ಕರ್ತವ್ಯದ ಅಧಿಕಾರಿಯಾಗಿ (ರಕ್ಷಣಾ ಕಾರ್ಯದರ್ಶಿ-ನಿಯೋಜಿತ) ಸೇವೆ ಸಲ್ಲಿಸಿದ್ದರು. ಅಧಿಕಾರ ವಹಿಸಿಕೊಂಡ ಮೊದಲ ದಿನ, ಸಿಂಗ್ ಅವರು ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ ದೇಶಕ್ಕಾಗಿ ಹೋರಾಡಿ ವೀರ ಮರಣವನ್ನಪ್ಪಿದ ವೀರರಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು , ತಾಯ್ನಾಡಿಗಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದ ನಮ್ಮ ವೀರ ಸೈನಿಕರಿಗೆ ದೇಶ ಸದಾ ಋಣಿಯಾಗಿದೆ ಎಂದು ಹೇಳಿದರು. ನಮ್ಮ ಸೈನಿಕರ ಅಸಾಧಾರಣ ಶೌರ್ಯ ಮತ್ತು ತ್ಯಾಗ ಭಾರತವನ್ನು ಸುರಕ್ಷಿತ ಮತ್ತು ಸಮೃದ್ಧ ರಾಷ್ಟ್ರವನ್ನಾಗಿ ಮಾಡಲು ನಮಗೆ ಶಕ್ತಿಯನ್ನು ನೀಡುತ್ತದೆ ಮತ್ತು ಈ ತ್ಯಾಗಗಳು ನಮ್ಮ ಸ್ಫೂರ್ತಿಯ ಮೂಲವಾಗಿದೆ ಎಂದರು.
ರಾಜೇಶ್ ಕುಮಾರ್ ಸಿಂಗ್ ಅವರು ಏಪ್ರಿಲ್ 24, 2023 ರಿಂದ ಆಗಸ್ಟ್ 20, 2024 ರವರೆಗೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದಲ್ಲಿ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆಯ ಕಾರ್ಯದರ್ಶಿಯ ಜವಾಬ್ದಾರಿಯನ್ನು ಹೊಂದಿದ್ದರು.ಅಲ್ಲದೇ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯದಲ್ಲಿ ಪಶುಸಂಗೋಪನೆ ಮತ್ತು ಹೈನುಗಾರಿಕೆ ಕಾರ್ಯದರ್ಶಿಯಾಗಿದ್ದರು. ಅವರು ಕೇಂದ್ರ ಸರ್ಕಾರದಲ್ಲಿ ಹಲವಾರು ಇತರ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು.