ನವದೆಹಲಿ,ನ.01(DaijiworldNews/TA):ದಿಲ್ಲಿಯ ಶಾಹದಾರದಲ್ಲಿ ಮನೆಯ ಹೊರಗೆ ದೀಪಾವಳಿ ಆಚರಿಸುತ್ತಿದ್ದ ವ್ಯಕ್ತಿ ಮತ್ತು ಆತನ ಸೋದರಳಿಯನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪ್ರಕರಣ ಸಂಬಂಧ 17 ವರ್ಷದ ಹುಡುಗನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಹದಾರದ ಫಾರ್ಶ್ ಬಜಾರ್ ಪ್ರದೇಶದಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೃತರನ್ನು ಆಕಾಶ್ ಶರ್ಮಾ(44), ಆತನ ಸೋದರಳಿಯ ರಿಷಬ್ ಶರ್ಮಾ(16) ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಮೃತ ಆಕಾಶ್ ಮಗ ಕ್ರಿಶ್ ಶರ್ಮಾ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ವರದಿಯಾಗಿದೆ.
ಸೆರೆಯಾದ ದೃಶ್ಯದಲ್ಲಿ ಮೂವರು ತಮ್ಮ ಮನೆಯ ಹೊರಗೆ ಕಿರಿದಾದ ರಸ್ತೆಯಲ್ಲಿ ಪಟಾಕಿ ಹೊಡೆಯುತ್ತಿರುವುದು ಕಂಡು ಬಂದಿದ್ದು ಇದೇ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಅಪ್ರಾಪ್ತ ಬಾಲಕ ಹಾಗೂ ಶೂಟರ್, ಆಕಾಶ್ಗೆ ಸತತವಾಗಿ 5 ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ರಕ್ಷಿಸಲು ಬಂದಿದ್ದ ಆಕಾಶ್ ಸೋದರಳಿಯ ರಿಷಬ್ ಶರ್ಮಾಗೂ ಗುಂಡು ತಗುಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಓಡಿಕೊಂಡು ಬಂದ ಆಕಾಶ್ ಮಗನಿಗೂ ಗುಂಡು ತಗುಲಿದ್ದು, ಗಂಭೀರ ಗಾಯಗೊಂಡಿದ್ದಾನೆ ಎಂದು ವರದಿಯಾಗಿದೆ.
ಆರೋಪಿ ಅಪ್ರಾಪ್ತ ಬಾಲಕ ಮೃತ ಆಕಾಶ್ನ ದೂರದ ಸಂಬಂಧಿಯಾಗಿದ್ದು, ಕೆಲವು ತಿಂಗಳ ಹಿಂದೆ ಆತನಿಂದ 70,000 ರೂ. ಹಣ ಸಾಲ ಪಡೆದಿದ್ದರು ಎನ್ನಲಾಗಿದೆ. ತಿಂಗಳುಗಳು ಕಳೆದಿದ್ದರೂ ಹಣವನ್ನು ಹಿಂದಿರುಗಿಸಿರಲಿಲ್ಲ ಇದರಿಂದಾಗಿ ಆತನನ್ನು ಕೊಲೆ ಮಾಡುವಂತೆ ಶೂಟರ್ಗೆ ಅಪ್ರಾಪ್ತ ಬಾಲಕ ಸುಪಾರಿ ಕೊಟ್ಟಿರುವುದಾಗಿ ತಿಳಿದುಬಂದಿದೆ. ಈ ಕಾರಣದಿಂದ ಪ್ರಕರಣದಲ್ಲಿ 17 ವರ್ಷದ ಹುಡುಗನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.