National
ಸಿಎಂ ಸಿದ್ದರಾಮಯ್ಯ ವಿರುದ್ಧ ಸುದೀರ್ಘ ಸಂದೇಶ ಪ್ರಕಟಿಸಿದ ವಿಜಯೇಂದ್ರ
- Sat, Nov 02 2024 05:40:12 PM
-
ಬೆಂಗಳೂರು, ನ.02(DaijiworldNews/AA): ಪ್ರಧಾನಿ ನರೇಂದ್ರ ಮೋದಿಯವರನ್ನು ರಾಜಕೀಯ ಪುಡಾರಿಯ ರೀತಿಯಲ್ಲಿ ಸುಳ್ಳು ಆರೋಪಗಳನ್ನು ಮಾಡುವವರು ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿರುವ ವಿಚಾರವಾಗಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸುದೀರ್ಘ ಪ್ರಶ್ನೆಗಳನ್ನು ಕೇಳುವ ಮೂಲಕ ತಿರುಗೇಟು ನೀಡಿದ್ದಾರೆ.
ಮಾನ್ಯ ಸಿದ್ದರಾಮಯ್ಯನವರೇ, ನಿಮ್ಮ ಒಂದೂವರೆ ವರ್ಷದ ಆಡಳಿತದಲ್ಲಿ ನಿಮ್ಮ ಕೊಡುಗೆಗಳು ಏನೇನೂ ಇಲ್ಲ, ಅಭಿವೃದ್ಧಿಯ ಹಾದಿಯಲ್ಲಿ ಬರೀ ಶೂನ್ಯ, ಭ್ರಷ್ಟತೆಯ ಸಾಲು, ಸಾಲು ಹಗರಣಗಳು, ಸಾಮಾಜಿಕ ಶೋಷಣೆಗಳು, ಸ್ತ್ರೀ ಕುಲದ ಮೇಲಿನ ದೌರ್ಜನ್ಯಗಳು ಹತ್ತು ಹಲವು ಎಂದು ಟೀಕೆ ಮಾಡಿದ್ದಾರೆ.
ಇಂದಿಗೂ ಕರ್ನಾಟಕದ ಲಕ್ಷಾಂತರ ಜನ ಗುಡಿಸಲು ವಾಸಿಗಳಾಗಿದ್ದಾರೆ, ಸ್ವಂತ ಸೂರಿಲ್ಲದೇ ವಸತಿ ಹೀನರಾಗಿದ್ದಾರೆ. ಇವರಿಗಾಗಿ ನೀವು ಒಂದೇ ಒಂದು ನಿವೇಶವನ್ನು ವಿತರಿಸಲಾಗಿಲ್ಲ. ಆದರೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 5 ಸಾವಿರಕ್ಕೂ ಹೆಚ್ಚು ನಿವೇಶನಗಳ ದರೋಡೆ ನಿಮ್ಮ ಬಲಗೈ ಬಂಟ ಸಚಿವ ಭೈರತಿ ಸುರೇಶ್ ರವರ ನೇತೃತ್ವದಲ್ಲಿ ಹಾಗೂ ನಿಮ್ಮ ಮಾರ್ಗದರ್ಶನದಲ್ಲಿ ನಡೆದಿದೆ ಎಂಬುದಕ್ಕೆ ನೀವೊಬ್ಬರೇ ಉಚಿತವಾಗಿ ಪಡೆದ 14 ನಿವೇಶನಗಳು ಸಾಕ್ಷಿ ಹೇಳುತ್ತಿವೆ. ಈ ನಿಟ್ಟಿನಲ್ಲಿ ನ್ಯಾಯಾಲಯಗಳು ನಿಮ್ಮ ವಿರುದ್ಧ ತೀರ್ಪಿತ್ತಿವೆ ಎಂದು ಪೋಸ್ಟ್ ಮಾಡಿದ್ದಾರೆ.
ನೀವು ಪ್ರಾಮಾಣಿಕರೇ ಆಗಿದ್ದರೆ ಈಗಲೂ ಇಡಿ, ಸಿಬಿಐ ತನಿಖೆಗೆ ಏಕೆ ಹೆದರುತ್ತಿದ್ದೀರಿ? ನಿಮ್ಮ ಕೈ ಕೆಳಗಿನ ಅಧಿಕಾರಿಗಳಿರುವ ಲೋಕಾಯುಕ್ತದಿಂದಲೇ ತನಿಖೆ ಆಗುವಂತೆ ನೋಡಿಕೊಳ್ಳುತ್ತಿದ್ದೀರಿ. ನನ್ನ ನಿವೇಶನದ ಬೆಲೆ 62 ಕೋಟಿ ಎಂದು ಘೋಷಿಸಿದ ನೀವು ಬೇಷರತ್ತಾಗಿ ಮುಡಾಗೆ ನಿವೇಶನಗಳನ್ನು ಹಿಂದಿರುಗಿಸಿದ್ದು ಏಕೆ? ಎಂಬುದನ್ನು ಕರ್ನಾಟಕದ ಜನತೆ ಅರಿಯದಿರುವಷ್ಟು ಮುಗ್ಧರಲ್ಲ. ಕಳ್ಳ ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲು ಕುಡಿಯುತ್ತಿದ್ದರೆ' ಅದನ್ನು ನೋಡಿಕೊಂಡು ಸ್ವಾಭಿಮಾನಿ ಕನ್ನಡಿಗರು ಸುಮ್ಮನಾಗಿಬಿಡುತ್ತಾರೆಂದು ನೀವು ಭಾವಿಸಿದ್ದರೆ ಅದು ನಿಮ್ಮ ಮೂರ್ಖತನವಷ್ಟೇ' ಎಂದು ಕಿಡಿಕಾರಿದ್ದಾರೆ.
ಅಹಿಂದ ಹೆಸರೇಳಿಕೊಂಡು ಬಂದ ನೀವು ಮಾತುಮಾತಿಗೂ ಅಹಿಂದ, ಅಹಿಂದ ಎಂದು ಪಠನೆ ಮಾಡುವ ನೀವು 'ಹಿಂದ'ವರ್ಗಗಳಿಗೆ ನೀಡಿದ ಕಲ್ಯಾಣ ಕಾರ್ಯಕ್ರಮಗಳೇನು? ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ದೇವರಾಜ ಅರಸು ಅಭಿವೃದ್ಧಿ ನಿಗಮ ಹಾಗೂ ಇತರ ಹಿಂದುಳಿದ ಹಾಗೂ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿ ನಿಗಮಗಳಿಗೆ ನೀವು ಅಧಿಕಾರಕ್ಕೆ ಬಂದ ನಂತರ ಎಷ್ಟು ಅನುದಾನ ನೀಡಿದ್ದೀರೆನ್ನುವ ದಾಖಲೆಗಳನ್ನು ಬಿಡುಗಡೆ ಮಾಡಿ? ಶೋಷಿತ ವರ್ಗಗಳಿಗೆ ಅನುದಾನ ಬಿಡುಗಡೆ ಮಾಡುವ ಮಾತು ಹಾಗಿರಲಿ, ವಿಶ್ವಕವಿ ಎಂದು ಮಾನ್ಯತೆ ಪಡೆದ ಪೂಜ್ಯ ವಾಲ್ಮೀಕಿ ಅವರ ಹೆಸರಿರುವ ನಿಗಮದಲ್ಲಿ ಪರಿಶಿಷ್ಟ ಪಂಗಡದ, ಆದಿವಾಸಿ ಜನರ ಕಲ್ಯಾಣದ ಕಾರ್ಯಗಳಿಗೆ ಮೀಸಲಾಗಿ ಠೇವಣಿ ಇರಿಸಿದ್ದ ಬ್ಯಾಂಕ್ ಖಾತೆಗೆ ನಿಮ್ಮ ಸಚಿವರ ಮೂಲಕ ಕನ್ನ ಹಾಕಿಸಿದವರು ನೀವಲ್ಲ ಎಂಬುದನ್ನು ನೀವು ಸಾಬೀತು ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ಕೆಐಡಿಬಿ ಮೂಲಕ ನಿಮ್ಮ ರಾಷ್ಟ್ರೀಯ ಅಧ್ಯಕ್ಷರ ಕುಟುಂಬ ಹಾಗೂ ಇತರ ಸ್ವಜನರಿಗೆ ಕೆಐಡಿಬಿಯಲ್ಲಿ ಮಂಜೂರಾಗಿರುವ ಸಿ.ಎ ನಿವೇಶನ ಹಗರಣವು ಸ್ವತಃ ನಿಮ್ಮ ರಾಷ್ಟ್ರೀಯ ಅಧ್ಯಕ್ಷರ ಕುಟುಂಬಕ್ಕೆ ಅಕ್ರಮವಾಗಿ ಮಂಜೂರಾತಿ ಮಾಡಿರುವ ಕಾರಣ ಅವರೂ ತಮ್ಮ ನಿವೇಶನ ಹಿಂದಿರುಗಿಸುವ ಘೋಷಣೆ ಮಾಡಿದ್ದಾರೆ. ಅಂದ ಮೇಲೆ ಕೆಐಡಿಬಿಯಿಂದ ಮಂಜೂರಾದ ನಿವೇಶನಗಳೂ ಅಕ್ರಮ ಎಂಬುದು ಸಾಬೀತಾದಂತಾಗಿದೆ ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಕರ್ನಾಟಕ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಪ್ರಧಾನಿಯವರನ್ನು ಉಲ್ಲೇಖಿಸಿ ಕುವೆಂಪುರವರ 'ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ' ಎಂಬ ನಾಡಗೀತೆಯನ್ನು ನೆನಪಿಸಿದ್ದೀರಿ, ಆದರೆ ಕುವೆಂಪು ಅವರು ಬಣ್ಣಿಸಿದ' ಸರ್ವಜನಾಂಗದ ಶಾಂತಿಯ ತೋಟ…ಕದಡಿ ವಕ್ಫ್ ಹೆಸರಿನಲ್ಲಿ ಈ ನೆಲದ ಮಣ್ಣಿನ ಮಕ್ಕಳ ಹಾಗೂ ಶರಣ ಪರಂಪರೆಯ ಮಠ,ದೇವಸ್ಥಾನಗಳ ಭೂಮಿಯನ್ನು ಕಬಳಿಸಲು ಮೊಘಲ್ ಆಕ್ರಮಣಕಾರರ ರೀತಿಯಲ್ಲಿ ಭೂದಾಖಲೆಗಳಿಗೆ ಕನ್ನ ಹಾಕಿ ವಕ್ಫ್ ಹೆಸರಿನ ಕಪ್ಪು ಚುಕ್ಕೆಗಳನ್ನು ಅಚ್ಚೊತ್ತಿಸುತ್ತಿದ್ದೀರಿ, ಕುವೆಂಪು ಅವರ ಶಾಂತಿಯ ತೋಟ ಕರುನಾಡಿನಲ್ಲಿ ಅಶಾಂತಿ ಹಾಗೂ ಅರಾಜಕತೆಯ ಬೀಜಗಳನ್ನು ಬಿತ್ತಿ, ಅರಾಜಕತೆ ಸೃಷ್ಟಿಸಲು ಹೊರಟಿದ್ದೀರಿ. ಆ ಮೂಲಕ ನಿಮ್ಮ ಭ್ರಷ್ಟ ಮುಖವಾಡ ಮುಚ್ಚಿಕೊಳ್ಳುವ ಷಡ್ಯಂತ್ರ ರೂಪಿಸಿದ್ದೀರಿ. ಇದು ನೀವು ಕರ್ನಾಟಕಕ್ಕೆ ಕೊಡುತ್ತಿರುವ ಕೊಡುಗೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಹೆಸರಿನಲ್ಲಿ ವ್ಯವಸ್ಥಿತ ಅಪಪ್ರಚಾರ ನಡೆಸಿದಿರಿ. ಆದರೆ 80% ಕಮಿಷನ್ ವಸೂಲಾತಿಯ ಕುಖ್ಯಾತಿಯ ಮಾಲೆ ನಿಮಗೆ ತೊಡಿಸಿದವರು 80% ಕಮಿಷನ್ ನೀಡಿದ ಗುತ್ತಿಗೆದಾರರೇ ಅಲ್ಲವೇ? ಪ್ರಧಾನಿಗಳನ್ನು ಟೀಕಿಸುವ ಭರದಲ್ಲಿ ಈ ಅಂಶವನ್ನು ನೀವು ಮರೆತಿರೇನೋ? ಎಂದು ಲೇವಡಿ ಮಾಡಿದ್ದಾರೆ.
ನಿಮ್ಮ ಕಾಂಗ್ರೆಸ್ ಗೆ ರಾಷ್ಟ್ರ ಮಟ್ಟದ ಅಸ್ತಿತ್ವವನ್ನು ಗಟ್ಟಿಗೊಳಿಸಲು 'ಇಂಡಿ ಒಕ್ಕೂಟದ'ಡಿ.ಎಂ.ಕೆ ತೃಪ್ತಿಪಡಿಸಲು ಕಾವೇರಿ ನೀರನ್ನು ತಮಿಳುನಾಡಿಗೆ ಹರಿಯಬಿಟ್ಟು ರೈತರ ಬೆಳೆಯನ್ನು ಒಣಗಿಸಿ ಬರಡು ಮಾಡಿದ್ದು ನೀವೇ ಅಲ್ಲವೇ? ಈ ನಿಟ್ಟಿನ ರೈತ ಹೋರಾಟಗಳನ್ನು ಹತ್ತಿಕ್ಕಲು ಅಮಾಯಕ ರೈತರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಜೈಲಿಗೆ ದಬ್ಬಿದ್ದು ನೀವೇ ಅಲ್ಲವೇ? ಎಂದು ಕೇಳಿದ್ದಾರೆ.
ಮಾನ್ಯ @siddaramaiah ನವರೇ,
— Vijayendra Yediyurappa (@BYVijayendra) November 2, 2024
ನಿಮ್ಮ ಒಂದೂವರೆ ವರ್ಷದ ಆಡಳಿತದಲ್ಲಿ ನಿಮ್ಮ ಕೊಡುಗೆಗಳು ಏನೇನೂ ಇಲ್ಲ, ಅಭಿವೃದ್ಧಿಯ ಹಾದಿಯಲ್ಲಿ ಬರೀ ಶೂನ್ಯ, ಭ್ರಷ್ಟತೆಯ ಸಾಲು, ಸಾಲು ಹಗರಣಗಳು, ಸಾಮಾಜಿಕ ಶೋಷಣೆಗಳು, ಸ್ತ್ರೀ ಕುಲದ ಮೇಲಿನ ದೌರ್ಜನ್ಯಗಳು ಹತ್ತು ಹಲವು.
•ಇಂದಿಗೂ ಕರ್ನಾಟಕದ ಲಕ್ಷಾಂತರ ಜನ ಗುಡಿಸಲು ವಾಸಿಗಳಾಗಿದ್ದಾರೆ, ಸ್ವಂತ ಸೂರಿಲ್ಲದೇ… https://t.co/ivqjwS5wRi