ಬೆಂಗಳೂರು, ನ.02(DaijiworldNews/AA): ವಕ್ಫ್ ಬೋರ್ಡ್ ಏನು ಎಂದು ಸಿಎಂ ಸಿದ್ದರಾಮಯ್ಯಗೆ ಗೊತ್ತಿಲ್ಲ. ನೋಟಿಸ್ ವಾಪಸ್ ಪಡೆದ ತಕ್ಷಣ ವಕ್ಫ್ನಿಂದ ಜಮೀನು ವಾಪಸ್ ಹೋಗೊದಿಲ್ಲ ಎಂದು ವಿಧಾನ ಪರಿಷತ್ ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೈತರಿಗೆ ವಕ್ಫ್ ಬೋರ್ಡ್ ನೀಡಿರುವ ನೋಟಿಸ್ ವಾಪಸ್ ಪಡೆಯುವಂತೆ ಸಿಎಂ ಸೂಚನೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದರು. ನೋಟಿಸ್ ವಾಪಸ್ ಪಡೆದರೆ, ನೋಟಿಸ್ ಮಾತ್ರ ಹೋಗುತ್ತದೆ. ಜಮೀನು ಹೋಗಲ್ಲ. ಮುಂದೆ ಚಕ್ರ ಬಡ್ಡಿ ಸೇರಿ ವಸೂಲಿ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
೧೯೭೪ ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಹೊರಡಿಸಿದ್ದ ಗೆಜೆಟ್ ನೋಟಿಫಿಕೇಷನ್ ವಾಪಸ್ ಪಡೆಯಬೇಕು. ಆಗ ಮಾತ್ರ ರೈತರಿಗೆ ನ್ಯಾಯ ಸಿಗಲಿದೆ ಎಂದಿದ್ದಾರೆ.
ಗ್ಯಾರಂಟಿ ಯೋಜನೆಗಳ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಮಲ್ಲಿಕಾರ್ಜುನ ಖರ್ಗೆಯವರು ಈ ಬಗ್ಗೆ ಸ್ಪಷ್ಟ ನಿಲುವು ಹೇಳಿದ್ದಾರೆ. ಡಿ.ಕೆ ಶಿವಕುಮಾರ್ ಶಕ್ತಿ ಯೋಜನೆ ಬಗ್ಗೆ ಮಾತನಾಡಿರೋದಕ್ಕೆ ಅವರು ದೆಹಲಿಯಿಂದ ಬಂದಿದ್ದಾರೆ. ಮಹಾರಾಷ್ಟ್ರದಲ್ಲೂ ಗ್ಯಾರಂಟಿ ಘೋಷಣೆ ಮಾಡುವ ವೇಳೆ ಹೀಗೆ ಹೇಳಿದರೆ ಜನರಿಗೆ ಅನುಮಾನ ಬರಲಿದೆ ಎಂದಿದ್ದಾರೆ. ಸದ್ಯ ಶಕ್ತಿ ಯೋಜನೆಯನ್ನ ಹಿಂಪಡೆಯುವುದನ್ನ ತಡೆದಿದ್ದಾರೆ. ಇದು ಸ್ಟೇ ರೀತಿ, ಚುನಾವಣೆ ಬಳಿಕ ಶಕ್ತಿ ಯೋಜನೆ ನಿಲ್ಲಿಸೋದು ನೂರಕ್ಕೆ ನೂರು ಸತ್ಯ ಎಂದು ಹೇಳಿದ್ದಾರೆ.
ಶಾಸಕರು ಕೂಡ ಇದರ ಬಗ್ಗೆ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಶಿವಕುಮಾರ್ ಹಾಗೂ ಸಿ.ಎಂ ಸಿದ್ದರಾಮಯ್ಯ ಮಧ್ಯೆ ಹೊಂದಾಣಿಕೆ ಇಲ್ಲ. ಅವರು ನಿಲ್ಲಿಸುತ್ತೇವೆ ಎನ್ನುತ್ತಾರೆ. ಇವರು ಮುಂದುವರೆಸುತ್ತೇವೆ ಎನ್ನುತ್ತಾರೆ. ಇದನ್ನ ಪ್ರಧಾನಿ ಪ್ರಸ್ತಾಪ ಮಾಡಿದ್ದಕ್ಕೆ ಅವರನ್ನ ಕೆಟ್ಟದಾಗಿ ಬಿಂಬಿಸಿ, ಪುಡಾರಿ ಎಂದಿದ್ದಾರೆ. ಇದರಿಂದ ನಾವು ವಿಚಲಿತ ಆಗೋದಿಲ್ಲ ಎಂದರು.