ಚಿಕ್ಕಮಗಳೂರು,ನ.02(DaijiworldNews/TA):ಸಿದ್ದರಾಮಯ್ಯನವರೇ ನೀವು ಮೋದಿಯವರನ್ನ ಟೀಕೆ ಮಾಡಿದ್ರೆ ಸೂರ್ಯನಿಗೆ ಉಗಿದಂತೆ. ಅದು ನಿಮ್ಮ ಮುಖಕ್ಕೆ ಮೆತ್ತಿಕೊಳ್ಳುತ್ತದೆ. ಅದನ್ನು ನೀವೇ ತೊಳೆದುಕೊಳ್ಳಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ವಿಚಾರವಾಗಿ ಮೋದಿ ಟ್ವೀಟ್ಗೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯರ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ ವಕ್ಫ್ ವಿಚಾರವಾಗಿಯೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಕ್ಫ್ ನೋಟೀಸ್ ಕಾನೂನು ಬಾಹಿರವಾದುದು, ಹಳ್ಳಿಗಳಿಗೆ ಹೋಗಿ ವಕ್ಫ್ ಅದಾಲತ್ ಮಾಡಿದ್ದು ಯಾರು? ಬಿಜೆಪಿಯವರೋ ಅಥವಾ ಸಚಿವ ಜಮೀರ್ ಅವರೋ? ಸಿದ್ದರಾಮಯ್ಯ ಈಗ ಸುಳ್ಳು ರಾಮಯ್ಯ ಆಗಿಹೋಗಿದ್ದಾರೆ. ಜಮೀರ್ ಅವರು ಸಿಎಂ ಸೂಚನೆ ಮೇರೆಗೆ ನಾನು ವಕ್ಫ್ ಅದಾಲತ್ ಮಾಡ್ತಿದ್ದೇನೆ ಎಂದು ಹೇಳಿದ್ದಾರೆ. ಇವರು ಸುಮ್ಮನೆ ಬರ್ತಾರೆ, ಹೋಗ್ತಾರೆ ಎಂದು ಭಾವಿಸಬೇಡಿ ಎಂದು ಜಮೀರ್ ಹೇಳಿಕೆಯ ತುಣುಕು ತೋರಿಸಿ ಆಕ್ರೋಶ ಹೊರಹಾಕಿದ್ದಾರೆ ಸಿ.ಟಿ ರವಿ.