ಹುಬ್ಬಳ್ಳಿ, ನ.03(DaijiworldNews/AK):ಅನ್ವರ್ ಮಾನಿಪ್ಪಾಡಿ ವರದಿಯಲ್ಲಿರುವಂತೆ ವಕ್ಫ್ ಆಸ್ತಿ ಕಬಳಿಸಿರುವ ಕಾಂಗ್ರೆಸ್ ನಾಯಕರಿಂದ ವಕ್ಫ್ ಆಸ್ತಿ ವಶಪಡಿಸಿಕೊಳ್ಳುವಂತೆ ವಕ್ಪ್ ಮಂಡಳಿಗೆ ಹೇಳಿದ್ದೆ ವಿನಃ ರೈತರ ಆಸ್ತಿಯನ್ನಲ್ಲಾ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಕ್ಫ್ ಸಚಿವ ಜಮೀರ್ ಅಹಮದ್ ಅವರು ನನ್ನ ಹಳೆಯ ವಿಡಿಯೊ ಬಿಡುಗಡೆ ಮಾಡಿ, ನಾನು ರೈತರ ಜಮೀನು ವಶಪಡಿಸಿಕೊಳ್ಳಲು ವಕ್ಫ್ ಗೆ ಹೇಳಿದ್ದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.
ನಾನು ವಕ್ಫ್ ಸಮಾರಂಭದಲ್ಲಿ ಮಾತನಾಡಿದ್ದೆ ವಿನಃ ಮಂಡಳಿ ಬೋರ್ಡ್ ಯಾವುದೇ ಸಭೆ ಮಾಡಿಲ್ಲ. ನಾನು ಅಂದು ಹೇಳಿರುವುದು ಅನ್ವರ್ ಮಾನಿಪ್ಪಾಡಿ ಅವರ ಸಮಿತಿ ವರದಿ ನೀಡಿದೆ. ಕಾಂಗ್ರೆಸ್ ನ್ ದೊಡ್ಡ ದೊಡ್ಡ ನಾಯಕರು ಮೋಸದಿಂದ ಎಷ್ಟೆಷ್ಟು ವಕ್ಫ್ ಆಸ್ತಿ ನುಂಗಿದ್ದಾರೆ ಎಂದು ಅನ್ವರ್ ಮಾನಿಪ್ಪಾಡಿ ವರದಿಯಲ್ಲಿ ಸ್ಪಷ್ಟವಾಗಿದೆ. ನಾವು ರೈತರಿಗೆ ಯಾವುದೇ ನೊಟಿಸ್ ಕೊಟ್ಟಿಲ್ಲ ರೈತರ ಜಮೀನು ವಶಪಡೆದುಕೊಂಡಿಲ್ಲ ಎಂದು ತಿಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಿಗೆ ಕೊಟ್ಟಿರುವ ನೋಟಿಸ್ ವಾಪಸ್ ಪಡೆಯುವಂತೆ ಹೇಳಿರುವುದು ಕಣ್ಣೊರೆಸುವ ತಂತ್ರ. ನೋಟಿಸ್ ವಾಪಸ್ ಪಡೆದು ಚುನಾವಣೆ ಮುಗಿದ ನಂತರ ಮತ್ತೆ ನೋಟೀಸ್ ಕೊಡುವುದಿಲ್ಲ ಎನ್ನುವುದಕ್ಕೆ ಯಾವ ಗ್ಯಾರಂಟಿ? ಮುಖ್ಯಮಂತ್ರಿಗಳಿಗೆ ರೈತರ ಬಗ್ಗೆ ನಿಜವಾಗಲೂ ಕಾಳಜಿ, ರೈತರ ಆಸ್ತಿ ಉಳಿಸಬೇಕೆಂದಿದ್ದರೆ ಅವರ ಮೇಲೆ ಗೌರವ ಇದ್ದರೆ ಗೆಜೆಟ್ ನೊಟಿಫಿಕೇಶ್ ರದ್ದು ಮಾಡಬೇಕು. ಯಾವುದೇ ರೈತರಿಗೆ ನೋಟಿಸ್ ಕೊಡಬಾರದು ಎಂದು ಆಗ್ರಹಿಸಿದರು.