ಮೈಸೂರು,ನ.04(DaijiworldNews/AK): ಮುಡಾ ಹಗರಣದ ತನಿಖೆ ಚುರುಕುಗೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಎ1 ಆರೋಪಿಯಾಗಿರುವ ಸಿಎಂ ಸಿದ್ದರಾಂಯ್ಯನವರಿಗೆ ಲೋಕಾಯುಕ್ತ ನೋಟಿಸ್ ಜಾರಿ ಮಾಡಿದೆ. ನ.6ರಂದು ಮೈಸೂರಿನ ಲೋಕಾಯುಕ್ತ ಕಚೇರಿಗೆ ವಿಚಾರಣೆಗೆ ಹಾಜರಾಗಬೇಕೆಂದು ಸಿದ್ದರಾಮಯ್ಯಗೆ ಸೂಚನೆ ನೀಡಲಾಗಿದೆ.
ಈಗಾಗಲೇ ಲೋಕಾಯುಕ್ತ ಎಲ್ಲಾ ಆರೋಪಿಗಳ ವಿಚಾರಣೆ ಮುಗಿಸಿದ್ದು, ಸಿದ್ದರಾಮಯ್ಯನವರ ವಿಚಾರಣೆಯೊಂದೇ ಬಾಕಿ ಇತ್ತು. ಇದೀಗ ಎ1 ಆರೋಪಿಗೂ ಸಹ ಲೋಕಾಯುಕ್ತ ವಿಚಾರಣೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.
ಸುಮಾರ 40 ವರ್ಷಗಳಿಂದ ರಾಜಕಾರಣದಲ್ಲಿದ್ದ ಸಿದ್ದರಾಮಯ್ಯ ಯಾವುದೇ ರೀತಿ ಪ್ರಕರಣದಲ್ಲಿ ಆರೋಪಿಯಾಗಿ ವಿಚಾರಣೆ ಎದುರಿಸಿರಲಿಲ್ಲ. ಸಿದ್ದರಾಮಯ್ಯ ಜೀವನದ ಮೊದಲ ವಿಚಾರಣೆ ಇದಾಗಿದೆ.
ಈಗಾಗಲೇ ಎ2 ಪಾರ್ವತಿ ಸಿದ್ದರಾಮಯ್ಯ, ಎ3 ಮಲ್ಲಿಕಾರ್ಜುನ ಹಾಗೂ ಎ4 ದೇವರಾಜು ಸೇರಿ ಹಲವರ ವಿಚಾರಣೆಯನ್ನು ಲೋಕಾಯುಕ್ತ ವಿಚಾರಣೆ ನಡೆಸಿದೆ.