ಗುಜರಾತ್,ನ.06(DaijiworldNews/TA):ಆನಂದ್ ಜಿಲ್ಲೆಯ ಮುಂಬೈ- ಅಹಮದಾಬಾದ್ ಬುಲೆಟ್ ಟ್ರೈನ್ ಕಾರಿಡಾರ್ನಲ್ಲಿ ಮಂಗಳವಾರ ಸಂಜೆ ತಾತ್ಕಾಲಿಕ ಸೇತುವೆ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ವಸಾದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಜಸಾನಿ ತಿಳಿಸಿದ್ದಾರೆ. ನಿರ್ಮಾಣ ಹಂತದಲ್ಲಿರುವ ಸೇತುವೆಯ ಒಂದು ಭಾಗ ಕುಸಿದಿದೆ.ಆರಂಭದಲ್ಲಿ ಪೊಲೀಸರು ನಿರ್ಮಾಣ ಹಂತದಲ್ಲಿರುವ ಸೇತುವೆ ಕುಸಿದಿದೆ ಎಂದು ವರದಿ ಮಾಡಿದ್ದರು. ಆದರೆ, ಅನಂತರ ಬುಲೆಟ್ ರೈಲು ಯೋಜನೆಯ ಮೇಲ್ವಿಚಾರಣೆ ನಡೆಸುತ್ತಿರುವ ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೋರೇಶನ್ ಲಿಮಿಟೆಡ್ ವಡೋದರಾದ ಮಾಹಿ ನದಿ ಸಮೀಪ ನಿರ್ಮಿಸಲಾಗಿದ್ದ ತಾತ್ಕಾಲಿಕ ಸ್ಟೀಲ್ ಹಾಗೂ ಕಾಂಕ್ರೀಟ್ ಸೇತುವೆ ಕುಸಿಯಿತು ಎಂದು ಸ್ಪಷ್ಟನೆ ನೀಡಿದೆ ಎನ್ನಲಾಗಿದೆ.
ನಾಲ್ವರು ಕಾರ್ಮಿಕರು ಕಾಂಕ್ರೀಟ್ ಬ್ಲಾಕ್ ಅಡಿಯಲ್ಲಿ ಸಿಲುಕಿಕೊಂಡರು. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಸಂದರ್ಭ ಸಾವನ್ನಪ್ಪಿದರು ಎಂದು ಆನಂದ್ನ ಅಗ್ನಿಶಾಮಕದ ದಳದ ಅಧಿಕಾರಿ ಧರ್ಮೇಶ್ ಗೋರ್ ತಿಳಿಸಿದ್ದಾರೆ.