ಬೆಂಗಳೂರು, ,ನ.06(DaijiworldNews/AK): ಮುಖ್ಯಮಂತ್ರಿಯವರು ಲೋಕಾಯುಕ್ತದ ಮುಂದೆ ತನಿಖೆಗೆ ಟೈಂಟೇಬಲ್ ಹಾಕಿದ್ದಾರೆ. 10 ಗಂಟೆಗೆ ಲೋಕಾಯುಕ್ತ, 12 ಗಂಟೆಗೆ ಚನ್ನಪಟ್ಟಣ ಎಂದು ತಿಳಿಸಿದ್ದಾರೆ. ಇದೇನು ಮ್ಯಾಚ್ ಫಿಕ್ಸಿಂಗಾ? ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಪ್ರಶ್ನಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ತನಿಖಾಧಿಕಾರಿಗಳು ಎಷ್ಟು ಗಂಟೆಗೆ ತನಿಖೆ ಮುಗಿಸುತ್ತಾರೆ ಎಂಬುದು ಹೇಗೆ ಗೊತ್ತಾಗಿದೆ? ಕೆಲವರು 5 ಗಂಟೆ ತೆಗೆದುಕೊಳ್ಳುತ್ತಾರೆ. ಇವರೇನು ಮೊದಲೇ ಫಿಕ್ಸ್ ಮಾಡಿದ್ದಾರಾ ಎಂದು ಜನರು ಕೇಳುತ್ತಿದ್ದಾರೆ ಎಂದರು.
ಯಾರಾದರೂ ಎ4 ನಿಂದ ತನಿಖೆಗೆ ಕರೀತಾರಾ? ದೂರುದಾರ ಸ್ನೇಹಮಯಿ ಕೃಷ್ಣ ಅವರು ಸಿಬಿಐ ತನಿಖೆಗೆ ಕೋರಿದ್ದರಿಂದ ಇವತ್ತು ಎ1 ಸಿದ್ದರಾಮಯ್ಯರ ತನಿಖೆ ನಡೆದಿದೆ ಎಂದು ಆರೋಪಿಸಿದರು. ಸಿದ್ದರಾಮಯ್ಯನವರ ‘ತೆರೆದ ಪುಸ್ತಕ’ದಲ್ಲಿ ಕಳೆದ 16 ತಿಂಗಳುಗಳಲ್ಲಿ ಜನರಿಗೆ ಲೂಟಿ ಬಿಟ್ಟರೆ ಬೇರೇನೂ ಕಾಣಿಸುತ್ತಿಲ್ಲ ಎಂದು ವ್ಯಂಗ್ಯವಾಗಿ ನುಡಿದರು.
ಸಿದ್ದರಾಮಯ್ಯನವರು ತಮ್ಮ 40 ವರ್ಷಗಳ ಜೀವನ ತೆರೆದ ಪುಸ್ತಕ ಎಂದಿದ್ದಾರೆ. ಪುಸ್ತಕ ತೆರೆದರೆ ಲೂಟಿ, ಲೂಟಿಯ ಕಪ್ಪುಚುಕ್ಕಿಗಳಿದ್ದು, ಒಂದೂ ಬಿಳಿ ಚುಕ್ಕಿ ಇಲ್ಲ. ಸ್ವತಃ ಮುಖ್ಯಮಂತ್ರಿಯೇ ನಿವೇಶನ ಲೂಟಿ ಮಾಡಿ ತಾವೇ ನೇಮಿಸಿದ ಪೊಲೀಸ್ ಅಧಿಕಾರಿ ಮುಂದೆ ತನಿಖೆಗೆ ಕುಳಿತುಕೊಳ್ಳಲು ನಾಚಿಕೆ ಆಗಬೇಕಲ್ಲವೇ ಎಂದು ಪ್ರಶ್ನಿಸಿದರು. ರಾಜ್ಯದ ಕಾಂಗ್ರೆಸ್ ಸರಕಾರವು ಜನತೆ ಮೇಲೆ ತೆರಿಗೆ ಭಾರ ಹೇರಿದೆ. ಇನ್ನೊಂದೆಡೆ ರಸ್ತೆಗಳಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಿನ ಎಲ್ಲ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ ಎಂದು ತಿಳಿಸಿದರು.
ಕಾಂಗ್ರೆಸ್ ಪಾರ್ಟಿಯ ಲೂಟಿಯದೂ ಪೋಸ್ಟರ್ ಅಂಟಿಸಿ:
ಅಬಕಾರಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. 1992ರಲ್ಲಿ ರೌಡಿಗಳು ಬೆಂಗಳೂರಿನಲ್ಲಿ ಹಫ್ತಾ ವಸೂಲಿ ಮಾಡುತ್ತಿದ್ದರು. ಅವರೆಲ್ಲ ನಾಚಿ ನೀರಾಗಿದ್ದಾರೆ. ಗೌರವಾನ್ವಿತ ತಿಮ್ಮಾಪುರ ಅವರು ವಾರಕ್ಕೆ 18 ಕೋಟಿ ಎಂದರೆ ವರ್ಷಕ್ಕೆ 500ರಿಂದ 900 ಕೋಟಿ ತಿಮ್ಮಾಪುರ ತೆರಿಗೆ ವಿಧಿಸುತ್ತಿದ್ದಾರೆ. ಇದು ಟಿಪಿಟಿ ಎಂದು ಆರ್.ಅಶೋಕ್ ಆರೋಪಿಸಿದರು.
ಪ್ರತಿಯೊಬ್ಬ ಡಿ.ಸಿ.ಗಳು 3ರಿಂದ 4 ಕೋಟಿ ಕೊಡಬೇಕು, ಡಿವೈಎಸ್ಪಿಗಳು 40 ಲಕ್ಷ, ಪ್ರತಿ ವೈನ್ ಸ್ಟೋರ್ಗೂ 20 ಸಾವಿರ ನಿಗದಿ ಪಡಿಸಿದ್ದಾರೆ. ಬೆಂಗಳೂರು ನಗರಕ್ಕೆ ಹೆಚ್ಚು ಹಣ ನಿಗದಿ ಮಾಡಿದ್ದಾರೆ. ಇದರ ಕುರಿತು ರಾಜ್ಯಪಾಲರಿಗೆ ದೂರು ಹೋಗಿದೆ. ಕಾಂಗ್ರೆಸ್ ಪಾರ್ಟಿಯ ಲೂಟಿಯದೂ ಪೋಸ್ಟರ್ ಅಂಟಿಸಿ ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು. ನೀವು ಪೋಸ್ಟರ್ ಅಂಟಿಸುವಾಗ ಬಂದು ಸನ್ಮಾನ ಮಾಡುತ್ತೇವೆ ಎಂದರು.
ಲಂಚಕ್ಕಾಗಿ ಅಮಾಯಕರ ಬಲಿ:
ಬೆಳಗಾವಿ ತಹಸೀಲ್ದಾರ್ ಕಚೇರಿಯಲ್ಲಿ ಎಸ್ಡಿಎ ರುದ್ರಣ್ಣ ಸರಕಾರಿ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದು, ಹಿಂದಿನ ದಿನ ಗ್ರೂಪಿಗೆ ಮೆಸೇಜ್ ಹಾಕಿದ್ದರು. ಮೆಸೇಜ್ ಡಿಲೀಟ್ ಮಾಡಿದ್ದ ತಹಸೀಲ್ದಾರ್ ಆತ್ಮಹತ್ಯೆಗೆ ಗ್ರೀನ್ ಸಿಗ್ನಲ್ ಕೊಟ್ಟರೇ? ಎಂದು ಕೇಳಿದರು. ರುದ್ರಣ್ಣನ ಪತ್ನಿಯೂ ಗರ್ಭಿಣಿ. ಈ ಸರಕಾರಕ್ಕೆ ಕರುಣೆ ಇಲ್ಲವೇ? ವಾಲ್ಮೀಕಿ ನಿಗಮದ ಹಗರಣದಲ್ಲೂ ಚಂದ್ರಶೇಖರ್ ಸಾವನ್ನಪ್ಪಿದ್ದು, ಸರಕಾರ ಲೂಟಿ ಮಾಡುವ ಸಂದೇಶ ಇದರಿಂದ ದೃಢವಾಗಿದೆ. ಲಂಚಕ್ಕಾಗಿ ಅಮಾಯಕರ ಬಲಿ ಆಗಿದೆ ಎಂದು ಆರ್.ಅಶೋಕ್ ಆರೋಪಿಸಿದರು.ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.