ಹಾವೇರಿ, ನ.06(DaijiworldNews/AK): ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಜೀವ ಬೆದರಿಕೆ ಹಾಕಿದ್ದ ಆರೋಪಿ ರಾಜಸ್ತಾನ ಮೂಲದ ಬಿಕಾರಾಮ್ನನ್ನು ಹಾವೇರಿಯಲ್ಲಿ ಬಂಧಿಸಲಾಗಿದೆ.
ಮುಂಬೈ ಪೊಲೀಸರ ಮಾಹಿತಿ ಮೇರೆಗೆ ಹಾವೇರಿ ಪೊಲೀಸರು ಕಾರ್ಯಚರಣೆ ನಡೆಸಿ ಬಿಕಾರಾಮ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಮುಂಬೈ ಪೊಲೀಸರಿಗೆ ಒಪ್ಪಿಸಿದ್ದಾರೆ.
ರಾಜಸ್ತಾನ ಮೂಲದ ಬಿಕಾರಾಮ್, ಒಂದೂವರೆ ತಿಂಗಳ ಹಿಂದೆ ಹಾವೇರಿಗೆ ಬಂದಿದ್ದ. ಗ್ರಿಲ್ ಕೆಲಸ ಮಾಡಿಕೊಂಡು ಹಾವೇರಿಯ ಗೌಡರ ಓಣಿಯಲ್ಲಿ ರೂಮ್ವೊಂದರಲ್ಲಿ ಕೂಲಿಕಾರರೊಂದಿಗೆ ವಾಸವಾಗಿದ್ದ. ವಿಚಾರ ತಿಳಿದ ಮುಂಬೈ ಪೊಲೀಸರು, ಕೂಡಲೇ ಅವರು ಹಾವೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರ ಆಧಾರದ ಮೇಲೆ ಜಿಲ್ಲಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
(ನ.4) ವರ್ಲಿ ಪ್ರದೇಶದಲ್ಲಿರುವ ಮುಂಬೈ ಸಂಚಾರ ಪೊಲೀಸ್ ನಿಯಂತ್ರಣ ಕೊಠಡಿಗೆ ಬೆದರಿಕೆ ಸಂದೇಶ ಬಂದಿದ್ದು, ‘ಕೃಷ್ಣಮೃಗ ಹತ್ಯೆಗೈದ ಘಟನೆಗೆ ಸಂಬಂಧಿಸಿ ಸಲ್ಮಾನ್ ಖಾನ್ ನಮ್ಮ(ಬಿಷ್ಣೋಯ್ ಸಮುದಾಯದ) ದೇವಸ್ಥಾನಕ್ಕೆ ಬಂದು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ 5 ಕೋಟಿ ರೂ. ನೀಡಬೇಕು. ತಪ್ಪಿದರೆ ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡಲಾಗುವುದು. ನಮ್ಮ ಗ್ಯಾಂಗ್ ಇನ್ನೂ ಸಕ್ರೀಯವಾಗಿದೆ ಎಂದು ಬೆದರಿಕೆ ಸಂದೇಶದಲ್ಲಿ ಉಲ್ಲೇಖವಾಗಿತ್ತು. ಅಲ್ಲದೇ ಬೆದರಿಕೆಯೊಡ್ಡಿದ ವ್ಯಕ್ತಿ ತಾನು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಸಹೋದರ ಎಂದು ಹೇಳಿಕೊಂಡಿದ್ದ.