ನವದೆಹಲಿ, ನ.08(DaijiworldNews/AA): ತನ್ನನ್ನು ಬಿಸಿನೆಸ್ ವಿರೋಧಿ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ. ಆದರೆ, ತಾನು ಬಿಸಿನೆಸ್ ವಿರೋಧಿಯಲ್ಲ. ಆದರೆ, ಆರ್ಥಿಕ ಶಕ್ತಿಯ ಕೇಂದ್ರೀಕರಣದ ವಿರೋಧಿ, ಬಿಸಿನೆಸ್ ಏಕಸ್ವಾಮ್ಯದ ವಿರೋಧಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
ರಾಹುಲ್ ಗಾಂಧಿ ಉದ್ಯಮ ಮತ್ತು ಉದ್ಯಮಿಗಳ ವಿರೋಧಿ ಎನ್ನುವಂತಹ ಟೀಕೆಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿರುವ ಅವರು, ತಾನು ಬಿಸಿನೆಸ್ ವಿರೋಧಿ ಅಲ್ಲ ಎಂದು ಸ್ಪಷ್ಟಪಡಿಸುವ ಪ್ರಯತ್ನ ಮಾಡಿದ್ದಾರೆ.
ಬಿಜೆಪಿಯಲ್ಲಿರುವ ನನ್ನ ವಿರೋಧಿಗಳು ನನ್ನನ್ನು ಬಿಸಿನೆಸ್ ವಿರೋಧಿ ಎಂಬಂತೆ ಬಿಂಬಿಸುತ್ತಿದ್ದಾರೆ. ನಾನು ಬಿಸಿನೆಸ್ ವಿರೋಧಿಯಲ್ಲ. ಆದರೆ, ಏಕಸ್ವಾಮ್ಯತೆಯನ್ನು ವಿರೋಧಿಸುತ್ತೇನೆ. ಕೆಲವೇ ಉದ್ಯಮಿಗಳ ಪ್ರಾಬಲ್ಯವನ್ನು ವಿರೋಧಿಸುತ್ತೇನೆ. ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಆಗಿ ನಾನು ವೃತ್ತಿ ಆರಂಭಿಸಿದೆ. ಬಿಸಿನೆಸ್ ಯಶಸ್ವಿಯಾಗಲು ಏನು ಅಗತ್ಯ ಎಂಬುದನ್ನು ಬಲ್ಲೆ. ಆದರೆ, ನಾನು ಬಸಿನೆಸ್ ವಿರೋಧಿಯಲ್ಲ. ಏಕಸ್ವಾಮ್ಯದ ವಿರೋಧಿ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಲು ಬಯಸುತ್ತೇನೆ, ಎಂದು ರಾಹುಲ್ ಗಾಂಧಿ ಪೋಸ್ಟ್ ನಲ್ಲಿ ಹೇಳಿದ್ದಾರೆ.
ತಮ್ಮ ವಿಡಿಯೋದಲ್ಲಿ ಈಸ್ಟ್ ಇಂಡಿಯ ಕಂಪನಿಯ ಉದಾಹರಣೆ ನೀಡಿದ್ದಾರೆ. ಈಸ್ಟ್ ಇಂಡಿಯಾ ಕಂಪನಿ ಬಿಸಿನೆಸ್ ತಂತ್ರದಿಂದ ಅಲ್ಲ, ಏಕಸ್ವಾಮ್ಯ ನಿಯಂತ್ರಣ ಮೂಲಕ ಭಾರತವನ್ನು ಹಿಡಿತಕ್ಕೆ ತೆಗೆದುಕೊಂಡರು. ದುರ್ಬಲ ಮಹಾರಾಜರು ಮತ್ತು ನವಾಬರಿಗೆ ಬೆದರಿಕೆ ಹಾಕುತ್ತಾ, ಲಂಚ ನೀಡುತ್ತಾ, ಹೊಂದಾಣಿಕೆಗೆ ನೂಕುತ್ತಾ ಭಾರತವನ್ನು ಉಸಿರುಗಟ್ಟಿಸಿದರು. ಬ್ಯಾಂಕಿಂಗ್, ಆಡಳಿತ, ಮಾಹಿತಿ ಜಾಲಗಳನ್ನು ನಿಯಂತ್ರಿಸಿದರು. ನಾವು ಬೇರೆ ದೇಶಕ್ಕೆ ನಮ್ಮ ಸ್ವಾತಂತ್ರ್ಯ ಕಳೆದುಕೊಳ್ಳಲಿಲ್ಲ. ಬದಲಾಗಿ ಏಕಸ್ವಾಮ್ಯ ಉದ್ದಿಮೆಗೆ ಸೋತೆವು ಎಂದಿದ್ದಾರೆ.