ಬಳ್ಳಾರಿ, ನ.09(DaijiworldNews/AA): ದ್ವೇಷದ ರಾಜಕಾರಣ ಒಳ್ಳೆಯದಲ್ಲ. ಪ್ರಾದೇಶಿಕ ಪಕ್ಷಗಳು ದ್ವೇಷದ ರಾಜಕಾರಣ ಮಾಡುತ್ತವೆ ಆದರೆ ರಾಷ್ಟ್ರೀಯ ಪಕ್ಷಗಳು ಈ ರೀತಿ ಮೊದಲ ಬಾರಿಗೆ ಮಾಡುತ್ತಿವೆ. ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಬಿ.ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.
ಬಳ್ಳಾರಿಯ ಸಂಡೂರು ಕ್ಷೇತ್ರದ ಬನ್ನಿಹಟ್ಟಿ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಒಂದೂವರೆ ವರ್ಷಗಳ ಕಾಲ ತುಟಿ ಬಿಚ್ಚದ ಸರ್ಕಾರ ಈಗ ಸಿದ್ದರಾಮಯ್ಯ ಹಗರಣಗಳನ್ನು ಮುಚ್ಚಿ ಹಾಕಲು ಯಡಿಯೂರಪ್ಪ, ನನ್ನ ಮೇಲೆ ಪ್ರಾಸಿಕ್ಯೂಷನ್ಗೆ ಶಿಫಾರಸು ಮಾಡಲು ಹೊರಟಿದ್ದಾರೆ ಇಂತಹ ಗೊಡ್ಡು ಬೆದರಿಕೆಗೆ ನಾವು ಜಗ್ಗುವುದಿಲ್ಲ, ಬಗ್ಗುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ಗೊಡ್ಡು ಬೆದರಿಕೆ ನನಗೆ ಏನು ಮಾಡದು. ನಾನು ಸಚಿವನಾಗಿದ್ದ ಅವಧಿಯಲ್ಲಿ ಕರೋನಾ ಕಲಬುರಗಿಯಿಂದ ರಾಜ್ಯದ ತುಂಬೆಲ್ಲಾ ಹರಡಿತ್ತು. ನಾನು ಆರೋಗ್ಯ ಸಚಿವನಾಗಿದ್ದೆ. ಟಾಸ್ಕ್ ಫೋರ್ಸ್ ಮಾಡಿಕೊಂಡು, ಕೆಲಸ ಮಾಡಿದ್ದೇವೆ. ರಾಜ್ಯ ಸರ್ಕಾರ ಮಾಡುತ್ತಿರುವ ಭ್ರಷ್ಟಾಚಾರ ಮುಚ್ಚಿಹಾಕಲು, ನನ್ನ ಮೇಲೆ, ಯಡಿಯೂರಪ್ಪ ಮೇಲೆ ಪ್ರಾಸಿಕ್ಯೂಷನ್ಗೆ ಶಿಫಾರಸು ಮಾಡಿದ್ದಾರೆ. ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ. ದೇವರ ಜೊತೆ ಅಂದು ನಾವು ಕೆಲಸ ಮಾಡಿದ್ದೇವೆ. ಅವರು ಏನು, ಮಾಡುತ್ತಾರೋ, ಮಾಡಲಿ ಎಂದು ತಿಳಿಸಿದರು.
ವಾಲ್ಮೀಕಿ ಹಗರಣ ಯಾಕೆ ಆಯ್ತು? ಅಂತ ನಾವು ಜನರ ಬಳಿ ಹೇಳ್ತಿದ್ದೇವೆ. ಇದನ್ನೆಲ್ಲ ಮುಚ್ಚಿಹಾಕುವ ಷಡ್ಯಂತ್ರಗಳಿಂದ ಈಗ ಕೋವಿಡ್ ವಿಚಾರ ತೆಗೆದಿದ್ದಾರೆ. ಒಂದೂವರೇ ವರ್ಷಗಳ ಕಾಲ ಏನು ಮಾಡ್ತಿದ್ರಿ? ನನ್ನ ವಿರುದ್ಧ ಒಂದೇ, ಒಂದು ಆರೋಪ ಸಾಬೀತು ಮಾಡಲಿ. ದ್ವೇಷದ ರಾಜಕಾರಣ ಒಳ್ಳೆಯದಲ್ಲ. ಪ್ರಾದೇಶಿಕ ಪಕ್ಷಗಳು ದ್ವೇಷದ ರಾಜಕಾರಣ ಮಾಡುತ್ತವೆ ಆದರೆ ರಾಷ್ಟ್ರೀಯ ಪಕ್ಷಗಳು ಈ ರೀತಿ ಮೊದಲ ಬಾರಿಗೆ ಮಾಡುತ್ತಿವೆ. ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದರು.