ಬೆಂಗಳೂರು, ನ.10(DaijiworldNews/AA): ಮೈಸೂರಿನಲ್ಲಿ ಸಚಿವರಿಗೆ ಕಪಾಳಕ್ಕೆ ಹೊಡೆಯಲಾಗಿದೆ ಎಂಬ ಹೆಚ್ಡಿ ಕುಮಾರಸ್ವಾಮಿ ಆರೋಪ ಸುಳ್ಳು ಎಂದು ಡಿಸಿಎಂ ಡಿಕೆ ಶಿವಕುಮಾರ್ ಕಿಡಿ ಕಾರಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದು ಇಲ್ಲಾ ಅದೆಲ್ಲಾ ಸುಳ್ಳು ಆರೋಪ. ಅವರಿಗೂ ಹಿಡಿದು ಯಾರೋ ಕಪಾಳಕ್ಕೆ ಹೊಡೆದರು ಎಂದು ನನಗೂ ಯಾರೋ ಹೇಳಿದರು. ಅದಕ್ಕೆ ಆಧಾರ ಇದೆಯಾ? ಯಾರಿಗೋ ಮೋಸ ಮಾಡಿದ್ದಾರಂತೆ, ಅವರಿಗೂ ಕಪಾಳಕ್ಕೆ ಹೊಡೆದರಂತೆ ಎಂದು ನನಗೂ ಹೇಳಿದರು. ಯಾರೋ ಹೇಳಿದರು ಎಂದು ಅದನ್ನು ನಾನು ನಂಬೋಕಾಗುತ್ತಾ, ಹೇಳೋಕಾಗುತ್ತಾ? ಯಾವ ಸಚಿವರು ಹೊಡೆದು ಇಲ್ಲಾ ಏನೂ ಇಲ್ಲಾ. ಬರಿ ಹಿಟ್ ಅಂಡ್ ರನ್ ಮಾಡೋಕೆ ಆಗುತ್ತಾ ಎಂದು ಕೇಳಿದ್ದಾರೆ.
ಮಹಾರಾಷ್ಟ್ರ ಚುನಾವಣೆಗೆ ಕರ್ನಾಟಕ ಸರ್ಕಾರ 700 ಕೋಟಿ ಸಂಗ್ರಹ ಎಂಬ ಪ್ರಧಾನಿ ಮೋದಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದೆಲ್ಲಾ ರಾಜಕೀಯವಾದ ಆರೋಪ. ಆರೋಪ ಸಾಬೀತು ಪಡಿಸಿದರೆ ಸಣ್ಣ ಶಿಕ್ಷೆಗೂ ಗುರಿಯಾಗುತ್ತೇವೆ. ದೊಡ್ಡ ಹುದ್ದೆಯಲ್ಲಿರುವವರು ಆಧಾರ ಇಲ್ಲದೇ ಆರೋಪ ಮಾಡಬಾರದು. ಮಹಾರಾಷ್ಟ್ರದಲ್ಲಿ ಗ್ಯಾರಂಟಿಗಳ ಬಗ್ಗೆ ಸುಳ್ಳು ಹೇಳಿಕೆ ಕೊಟ್ಟಿದ್ದರು. ಅದಕ್ಕಾಗಿ ನಾನು ಪತ್ರ ಬರೆಯುತ್ತಿದ್ದೇನೆ ಎಂದಿದ್ದಾರೆ.
ವಿಮಾನ, ಬಸ್ಗಳ ವ್ಯವಸ್ಥೆ ಮಾಡುತ್ತೇವೆ. ಗ್ಯಾರಂಟಿಗಳು ಜನತೆಗೆ ತಲುಪುತ್ತಿದೆಯಾ ಇಲ್ವಾ ಅಂತ ರಾಜ್ಯದ 30 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಮಾಹಿತಿ ಸಂಗ್ರಹಿಸಲಿ. ನಮ್ಮ ಪಕ್ಷದಿಂದಲೇ ವಿಶೇಷ ವಿಮಾನ ವ್ಯವಸ್ಥೆಯನ್ನು ಮಾಡುತ್ತೇವೆ, ಸಂಪೂರ್ಣ ವೆಚ್ಚವನ್ನು ನಾವೇ ಭರಿಸುತ್ತೇವೆ. ಸುಳ್ಳೇ ಬಿಜೆಪಿವರ ಅಸ್ತ್ರ. ಕರ್ನಾಟಕದಲ್ಲಿ ಇದರ ರುಚಿ ಗೊತ್ತಾಗಿದೆ. ಜನ ಅವರಿಗೆ ಉತ್ತರ ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.