ಚಿಕ್ಕಮಗಳೂರು,ನ.12(DaijiworldNews/AK): ದಶಕಗಳ ಬಳಿಕ ಮಲೆನಾಡಿನಲ್ಲಿ ನಕ್ಸಲರ ಸದ್ದು ಹೆಚ್ಚಾಗಿದೆ ಎನ್ನುವ ಬಗ್ಗೆ ಅಂತಕಕಾರಿ ಮಾಹಿತಿ ಹೊರಬಿದ್ದಿದೆ. 2014 ರ ನಂತರ ಮಲೆನಾಡಿನಲ್ಲಿ ಕೆಂಪು ಉಗ್ರರ ಹೆಜ್ಜೆ ಮತ್ತೆ 2024 ರಲ್ಲಿ ಗುರುತು ಪತ್ತೆಯಾಗಿದೆ.
ಮಲೆನಾಡಿನಲ್ಲಿ ಒತ್ತುವರಿ ತೆರವು ಗುಮ್ಮ ಕಸ್ತೂರಿ ರಂಗ್ ವರದಿ ಭಯದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಗ್ರಾಮಸ್ಥರ ಸಂಪರ್ಕ ಮಾಡುತ್ತಿರುವ ಕೆಂಪು ಉಗ್ರರ ಬಗ್ಗೆ ಪೊಲೀಸರು ಜಾಡು ಹಿಡಿದಿದ್ದಾರೆ ಎನ್ನಲಾಗಿದೆ.ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೊಲೀಸರು ನಕ್ಸಲ್ ಬೆಂಬಲಿಗರನ್ನು ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಜ್ಯ ಗುಪ್ತಚರ ಮಾಹಿತಿ ಆಧಾರದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಕಳೆದ ಎರಡು ದಿನದ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಓರ್ವ ವ್ಯಕ್ತಿಯನ್ನು ಭೇಟಿಯಾಗಲು ಬಂದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಗಡಿಭಾಗದ ಇಬ್ಬರು ಶಂಕಿತ ವ್ಯಕ್ತಿಗಳ ಬಗ್ಗೆ ರಾಜ್ಯ ಗುಪ್ತಚರ ಇಲಾಖೆಗೆ ಬಂದ ಖಚಿತ ಮಾಹಿತಿ ಆಧಾರದಲ್ಲಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದು. ಇಬ್ಬರಿಗೆ ಸಂಬಂಧಿಸಿದ ಸ್ಥಳದಲ್ಲಿ ಶೋಧ ನಡೆಸಿ ನಾಡ ಪಿಸ್ತೂಲ್ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.
ಕಾರ್ಕಳ ಎ.ಎನ್.ಎಫ್ ಎಸ್ಪಿ ಹಾಗೂ ಚಿಕ್ಕಮಗಳೂರು ಎಸ್ಪಿ ನೇತೃತ್ವದ ತಂಡದ ಪೊಲೀಸರು ನಕ್ಸಲರಿಗೆ ಮಾಹಿತಿ ಹಾಗೂ ಸಹಕಾರ ಹಿನ್ನಲೆಯಲ್ಲಿ ಇಬ್ಬರು ಶಂಕಿತರಿಗೆ ಸಂಬಂಧಿಸಿದ ಸ್ಥಳದಲ್ಲಿ ಶೃಂಗೇರಿ ಪೊಲೀಸ್ ಠಾಣೆಗೆ ಕರೆತಂದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ವಯನಾಡು ಲೋಕಸಭೆ ಉಪಚುನಾವಣೆ ಹಾಗೂ ಕಸ್ತೂರಿರಂಗನ್ ವಿವಾದ:
ವಯನಾಡು ಲೋಕಸಭೆ ಉಪಚುನಾವಣೆಯು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ರಾಷ್ಟ್ರ ನಾಯಕರು ಅಲ್ಲಿ ಸ್ವರ್ಧಾ ಕಣದಲ್ಲಿದ್ದಾರೆ. ಹೀಗಾಗಿ ಭದ್ರತಾ ವ್ಯವಸ್ಥೆ ಬಿಗುಗೊಳಿಸಲಾಗಿದೆ. ನಕ್ಸಲ್ ವಿರುದ್ಧ ಕೇರಳ ಸರಕಾರವು ದೃಢ ನಿಲುವು ತಳೆದುಕೊಂಡಿದ್ದು ಎನ್ ಕೌಂಟರ್ ಮೂಲಕ ಪ್ರತ್ಯುತ್ತರ ನೀಡುತ್ತಿದೆ. ಈ ಕಾರಣದಿಂದಾಗಿ ನಕ್ಸಲೀಯರು ತಮ್ಮ ಸುರಕ್ಷಿತೆ ಕಾಪಾಡುವ ನಿಟ್ಟಿನಲ್ಲಿ ಮತ್ತೇ ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ನೆಲೆಯೂರಲು ಎಲ್ಲಾ ಸಿದ್ಧತೆ ಮಾಡಿಕೊಂಡಿರಬಹುದು ಎನ್ನಲಾಗಿದೆ.
ಮತ್ತೊಂದೆಡೆ ಕಸ್ತೂರಿ ರಂಗನ್ ವರದಿ ಅನುಷ್ಠಾನದ ವಿರುದ್ಧ ಗ್ರಾಮಾಂತರ ಪ್ರದೇಶದಲ್ಲಿ ಹೋರಾಟಕ್ಕೆ ಕೃಷಿಕರು ಅಣಿಯಾಗುತ್ತಿದ್ದಂತೆ ನಕ್ಸಲೀಯರ ಹೆಜ್ಜೆ ಗುರುತು ಕಾಣಿಸಿಕೊಳ್ಳುತ್ತಿರುವುದು ಪೊಲೀಸ್ ಇಲಾಖೆಗೆ ನುಂಗಲಾರದಾದ ತುಪ್ಪವಾಗಿ ಪರಿಣಮಿಸಿದೆ.
ವಯನಾಡು ತ್ರಿರಾಜ್ಯಗಳ ಸಂಗಮ ಭೂಮಿ
ವಯನಾಡು ಕೇರಳ ರಾಜ್ಯದಲ್ಲಿ ಇದ್ದರೂ, ಅತ್ತ ತಮಿಳುನಾಡು, ಇತ್ತ ಕರ್ನಾಟಕ ಸಂಪರ್ಕಿಸುವ ಕೊಂಡಿಯಾಗಿದೆ. ಪರಿಸರವು ದಟ್ಟ ಅರಣ್ಯ ಪ್ರದೇಶವೂ ಆಗಿದೆ. ತುರ್ತು ಸಂದರ್ಭಗಳಲ್ಲಿ ತಮ್ಮ ಅಡಗುದಾಣಗಳನ್ನು ರಾಜ್ಯದಿಂದ ರಾಜ್ಯಕ್ಕೆ ಬದಲಾಯಿಸಿಕೊಳ್ಳುವ ಉದ್ದೇಶ ನಕ್ಸಲೀಯರು ಹೊಂದಿದ್ದಾರೆ.