ಚಿತ್ರದುರ್ಗ, ನ.12(DaijiworldNews/AA): ಮಹಾರಾಷ್ಟ್ರ ಹಾಗೂ ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಚುನಾವಣೆಗೆ ರಾಜ್ಯದ ಅಬಕಾರಿ ಇಲಾಖೆಯಿಂದ ಸಂಗ್ರಹಿಸಿದ ಹಣವನ್ನು ಬಳಕೆ ಮಾಡಲಾಗುತ್ತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪ ಮಾಡಿದ್ದಾರೆ.
ಚಿತ್ರದುರ್ಗದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಬಕಾರಿ ಇಲಾಖೆಯಿಂದ ದೊಡ್ಡ ಮೊತ್ತದ ಹಣವನ್ನು ಸಂಗ್ರಹ ಮಾಡಲಾಗಿದ್ದು, ಮದ್ಯದಂಗಡಿಗಳಿಗೆ ದರ ನಿಗದಿ ಪಡಿಸಲಾಗಿದೆ. ದಾಖಲೆಯ ರೀತಿ ಹಣ ಸಂಗ್ರಹ ಮಾಡಲಾಗಿದೆ. ವಾರದಲ್ಲೇ 18 ಕೋಟಿ ರೂಪಾಯಿ ಸಂಗ್ರಹಿಸಿ, ಅದನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಸರ್ಕಾರ, ಕರ್ನಾಟಕವನ್ನು ಲೂಟಿ ಮಾಡುತ್ತಿದ್ದು, ಇದನ್ನು ಎಟಿಎಂ ಮಾಡಿಕೊಂಡು ಇಲ್ಲಿನ ಹಣವನ್ನು ಬೇರೆ ಬೇರೆ ರಾಜ್ಯಗಳ ಚುನಾವಣೆಗೆ ಬಳಕೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ರಾಜ್ಯ ಕಾಂಗ್ರೆಸ್ ನಾಯಕರ ಭಾವಚಿತ್ರವಿರುವ ಅಕ್ಕಿಚೀಲಗಳನ್ನು ವಯನಾಡಿನಲ್ಲಿ ಹಂಚಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.