ಟಿ.ನರಸೀಪುರ,,ನ.13(DaijiworldNews/AK): ED, CBI, IT ಹಾಗೂ ರಾಜ್ಯಪಾಲರನ್ನು ದುರುಪಯೋಗ ಪಡಿಸಿಕೊಂಡು ಆಟ ಆಡ್ತೀರಾ?ಅರವಿಂದ್ ಕೇಜ್ರಿವಾಲ್ ಆಯ್ತು. ಈಗ ನನ್ನ ಮತ್ತು ನನ್ನ ಪತ್ನಿಯನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಮೈಸೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಿದ್ದ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿನ 470 ಕೋಟಿ ರೂಪಾಯಿ ಮೌಲ್ಯದ ಕಾಮಗಾರಿಗಳ ಉದ್ಘಾಟನೆ ಮತ್ತು ಕಟ್ಟಡಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಿ, ಫಲಾನುಭವಿಗಳಿಗೆ ನೇರವಾಗಿ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು.
ನಾನು ನೆನ್ನೆ ಮೊನ್ನೆ ಮಂತ್ರಿಯಾದವನಲ್ಲ. 40 ವರ್ಷದಿಂದ ಮಂತ್ರಿಯಾಗಿದ್ದೀನಿ: ಸುಳ್ಳು ಕೇಸಲ್ಲಿ ನನ್ನನ್ನು, ನನ್ನ ಧರ್ಮಪತ್ನಿಯನ್ನು ಎಳೀತೀರಾ? ರಾಜ್ಯದ ಜನರೇನು ಮೂರ್ಖರಾ. ರಾಜ್ಯದ ಜನರ ಆಶೀರ್ವಾದ ನನ್ನ ಮೇಲೆ ಇರುವವರೆಗೂ ನಾನು ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಷಡ್ಯಂತ್ರಗಳಿಗೆ ಜಗ್ಗಲ್ಲ, ಬಗ್ಗಲ್ಲ. ನೀವೂ ಕೂಡ ಸುಖಾ ಸುಮ್ಮನೆ ತಂಟೆಗೆ ಬಂದರೆ ಸುಮ್ಮನಿರಲ್ಲ ಎನ್ನುವ ಎಚ್ಚರಿಕೆ ಕೊಡಬೇಕಿದೆ ಎಂದು ಕರೆ ನೀಡಿದರು.
ಬಿಜೆಪಿ ಇವತ್ತಿನವರೆಗೂ ರಾಜ್ಯದಲ್ಲಿ ಸ್ವಂತ ಶಕ್ತಿಯಿಂದ ಒಂದು ಬಾರಿಯೂ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕ ಮಾತ್ರ ಅಧಿಕಾರಕ್ಕೆ ಬಂದಿದೆ. ಈ ಬಾರಿ ಕಾಂಗ್ರೆಸ್ಸಿನ 50 ಮಂದಿ ಶಾಸಕರಿಗೆ ತಲಾ 50 ಕೋಟಿ ಆಫರ್ ನೀಡಿ ಖರೀದಿಸಲು ಯತ್ನಿಸಿದ್ದಾರೆ. ಎಲ್ಲಿಂದ ಬರತ್ತೆ ಈ ಹಣ? ಯಡಿಯೂರಪ್ಪ, ಬೊಮ್ಮಾಯಿ, ಆರ್.ಅಶೋಕ್ ಪ್ರಿಂಟ್ ಹಾಕಿದ್ದಾ ಈ ಹಣ? ರಾಜ್ಯವನ್ನು ಲೂಟಿ ಹೊಡೆದ ಹಣ ತಾನೇ. ಆದರೆ ನಮ್ಮ ಶಾಸಕರು ಇವರ ಆಮಿಷಕ್ಕೆ ಒಳಗಾಗಲಿಲ್ಲ ಎಂದರು.
ಬಿಜೆಪಿಯವರು ಗ್ಯಾರಂಟಿಯ ಹಣ ತಗೊತಾ ಇಲ್ವಾ? ಎದೆ ಮುಟ್ಟಿಕೊಂಡು ಹೇಳಲಿ
ರಾಜ್ಯದಲ್ಲಿ ನಮ್ಮ ಐದೂ ಗ್ಯಾರಂಟಿಗಳು ಯಶಸ್ವೀ ಜಾರಿ ಆದ ಬಳಿಕ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಭಯಾನಕ ಸುಳ್ಳುಗಳನ್ನು ಹೊಸೆಯುತ್ತಿದ್ದಾರೆ.
ರಾಜ್ಯ ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ ಎನ್ನುವ ಹಸಿ ಹಸಿ ಸುಳ್ಳಿನ ಅಪಪ್ರಚಾರ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಗ್ಯಾರಂಟಿಗಳಿಗಾಗಿ 56 ಸಾವಿರ ಕೋಟಿ ರೂಪಾಯಿ ಕೊಟ್ಟರೆ, ಅಭಿವೃದ್ಧಿ ಕಾರ್ಯಗಳಿಗೆ 1 ಕೋಟಿ 20 ಲಕ್ಷ ರೂಪಾಯಿ ನೀಡಿದೆ. ಇಂದು ನರಸೀಪುರದಲ್ಲಿ 470 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ದೊರೆತಿದೆ. ಬಿಜೆಪಿಯ ಸುಳ್ಳುಗಳಿಗೆ ಇವತ್ತಿನ ಅಭಿವೃದ್ಧಿ ಕಾರ್ಯಕ್ರಮ ಕನ್ನಡಿ ಹಿಡಿದಿದೆ ಎಂದರು.