ಬೀದರ್, ನ.18(DaijiworldNews/AA): ಅಧಿಕಾರ ದಾಹಕ್ಕಾಗಿ ಏನು ಮಾಡಲು ಹಿಂಜರಿಯದವರು ಎಂದರೆ ಅದು ಬಿಜೆಪಿಯವರು. ಅವರು ಯಾವ ಮಟ್ಟಕ್ಕೂ ಇಳಿಯಲು ತಯಾರಾಗಿರುತ್ತಾರೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಬೀದರ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ 100 ಕೋಟಿ ರೂ. ಆಫರ್ ವಿಚಾರವಾಗಿ ಮಾತನಾಡಿದ ಅವರು, ಈ ರಾಜ್ಯದ ಜನರಿಗೆ ಬಿಜೆಪಿ ನಾಯಕರು ಉತ್ತರ ನೀಡಲಿ. 15 ಜನ ಶಾಸಕರನ್ನು ಖರೀದಿ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಸಿಎಂ ಆಗಲು 2500 ಕೋಟಿ ರೂ. ಕೊಡಬೇಕು ಎಂದು ಸ್ವತಃ ಯತ್ನಾಳ್ ಹೇಳಿದ್ದರು. ಇನ್ನೂ ಸಚಿವರಾಗಲು 500 ಕೋಟಿ ಕೊಡಬೇಕು ಎಂದು ಹೇಳಿದ್ದರು. ಯತ್ನಾಳ್ ಬಿಜೆಪಿ ವಿರುದ್ಧ ಏನೇ ಹೇಳಿದ್ದರೂ ಅದು ನೂರಕ್ಕೆ ನೂರು ಸತ್ಯವಿದೆ. ಯತ್ನಾಳ್ಗೆ ಏನಾದರೂ ಇಲ್ಲಿಯವರೆಗೆ ನೋಟಿಸ್ ಬಂದಿದೆಯಾ? ಎಂದು ಪ್ರಶ್ನಿಸಿದರು.
ಬಿಪಿಎಲ್ ಕಾರ್ಡ್ ರದ್ದತಿ ಕುರಿತು ಪ್ರತಿಕ್ರಿಯಿಸಿದ ಅವರು, ಬಿಪಿಎಲ್ ಕಾರ್ಡ್ ರದ್ದು ವಿಚಾರವಾಗಿ ಬಹಳಷ್ಟು ದೂರುಗಳಿವೆ. ಸಾಹುಕಾರರು, ಮನೆ ಇದ್ದವರು, ಸರ್ಕಾರಿ ನೌಕರರು, ಟ್ಯಾಕ್ಸ್ ಕಟ್ಟುವವರು ಬಿಪಿಎಲ್ ಕಾರ್ಡ್ ತೆಗೆದುಕೊಂಡಿದ್ದಾರೆ. ಬಡತನ ರೇಖೆಗಿಂತ ಕೆಳಗಿದ್ದವರಿಗೆ ಬಿಪಿಎಲ್ ಕಾರ್ಡ್ ಕೊಡಬೇಕು ಎಂಬ ನಿಯಮವಿದೆ. ಒಂದೊಂದು ಜಿಲ್ಲೆಯಲ್ಲಿ ಶೇ.95 ರಷ್ಟು ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ನೈಜವಾಗಿ ಯಾರು ಬಡತನದಲ್ಲಿ ಇದ್ದು, ಬಿಪಿಎಲ್ ಕಾರ್ಡ್ ಪಡೆದಿದ್ದರೆ ಅವರಿಗೆ ಯಾವುದೇ ವಂಚನೆಯಗುವುದಿಲ್ಲ ಎಂದು ತಿಳಿಸಿದರು.
ಬಿಜೆಪಿಯಲ್ಲಿ ಒಂದು ಮನೆ ನೂರು ಬಾಗಿಲು ಆಗಿವೆ. ಪಶ್ಚಾತ್ತಾಪ ಮಾಡಿಕೊಳ್ಳಲು ಬಿಜೆಪಿಯವರು ಪಾದಯಾತ್ರೆ ಮಾಡಲಿ. ವಕ್ಫ್ ವಿವಾದ ಹುಟ್ಟು ಹಾಕಿದ್ದು, ಮೊದಲು ನೋಟಿಸ್ ನೀಡಿದ್ದು ಬಿಜೆಪಿಯವರು. ಅಪರಾಧ ಮಾಡುವವರು, ದೂರು ನೀಡುವವರು, ವಿಚಾರಣೆ ಮಾಡುವವರು, ತೀರ್ಪು ನೀಡುವವರು ಎಲ್ಲವೂ ಬಿಜೆಪಿಯವರೇ. ಇದನ್ನೂ ಜನ ಅರ್ಥ ಮಾಡಿಕೊಳ್ಳುತ್ತಾರೆ. ಬಿಜೆಪಿ ಮುಗಿದ ಅಧ್ಯಾಯ, ಚರ್ಚೆ ಮಾಡಿ ಸಮಯ ಹಾಳು ಮಾಡಲಿ ಎಂದರು.