ಬೆಂಗಳೂರು, ನ.19(DaijiworldNews/AK): ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮ ದಿನವನ್ನು ಇಡೀ ದೇಶದಲ್ಲಿ ಆಚರಿಸಿ ಅವರು ದೇಶಕ್ಕಾಗಿ ಮಾಡಿದ ತ್ಯಾಗ ಬಲಿದಾನವನ್ನ ಸ್ಮರಿಸುತ್ತಿದ್ದೇವೆ. ದೇಶದ ಐಕ್ಯತೆಗಾಗಿ ಪ್ರಾಣವನ್ನೇ ತ್ಯಾಗ ಮಾಡಿದ ಅವರ ಬದುಕು ನಮ್ಮೆಲ್ಲರಿಗೂ ಆದರ್ಶ. ಅವರು ಕೆಚ್ಚೆದೆಯಿಂದ ದೇಶವನ್ನು ಆಳಿದರು ಎನ್ನುವುದನ್ನು ಮರೆಯಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂದಿಯವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷ ಸದಾ ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು, ರೈತರ ಪರವಾಗಿರುವ ಪಕ್ಷ. ಸಂವಿಧಾನದಲ್ಲಿ ಅಪಾರವಾದ ನಂಬಿಕೆ ಇಟ್ಟುಕೊಂಡು ಸಂವಿಧಾನದ ರೀತ್ಯಾ ಕೆಲಸ ಮಾಡುತ್ತಿರುವ ಪಕ್ಷ. ಯಾರೇ ಅಧಿಕಾರಕ್ಕೆ ಬಂದರೂ ಸಂವಿಧಾನದ ರೀತ್ಯಾ ಕೆಲಸ ಮಾಡಬೇಕು. ಅದರ ಧ್ಯೇಯೋದ್ದೇಶಗಳನ್ನು ಜಾರಿ ಮಾಡಬೇಕು. ಪ್ರತಿಯೊಬ್ಬರೂ ಇದನ್ನು ಪಾಲನೆ ಮಾಡಬೇಕಾದದ್ದು ಕರ್ತವ್ಯ. ಇಂದಿರಾ ಗಾಂಧಿಯವರು ಬಡವರ ಪರವಾಗಿ ಬಹಳಷ್ಟು ಕೆಲಸಗಳನ್ನು ಮಾಡಿದ್ದಾರೆ. ಭೂ ಸುಧಾರಣಾ ಕಾಯ್ದೆ, ಗರೀಬಿ ಹಟಾವೋ ಕಾರ್ಯಕ್ರಮ, ಬ್ಯಾಂಕುಗಳ ರಾಷ್ಟ್ರೀಕರಣ ಮುಂತಾದವುಗಳ ಫಲ ಬಡವರಿಗೆ ದೊರಕಬೇಕು. ಬಡವರು ಆರ್ಥಿಕವಾಗಿ ಸಾಮಾಜಿಕವಾಗಿ ಶಕ್ತಿಯನ್ನು ಪಡೆದುಕೊಳ್ಳಬೇಕೆಂಬ ಉದ್ದೇಶ ಅವರಿಗೆ ಇತ್ತು ಎಂದರು
ಬ್ಯಾಂಕುಗಳ ರಾಷ್ಟ್ರೀಕರಣದ ನಂತರ ಬ್ಯಾಂಕುಗಳ ಬಾಗಿಲು ಬಡವರಿಗೂ ತೆರೆಯಿತು:
ಬ್ಯಾಂಕುಗಳು ರಾಷ್ಟ್ರೀಕರಣವಾಗುವ ಮೊದಲು ಬಡವರು ಬ್ಯಾಂಕುಗಳ ಮೆಟ್ಟಿಲುಗಳನ್ನು ಹತ್ತಲು ಸಾಧ್ಯವಾಗುತ್ತಿರಲಿಲ್ಲ. ಇಂದಿರಾ ಗಾಂಧಿಯವರು ರಾಷ್ಟ್ರೀಕರಣ ಮಾಡಿದ ನಂತರ ಬ್ಯಾಂಕುಗಳ ಬಾಗಿಲು ಬಡವರಿಗೂ ತೆರೆಯಿತು. ಕಾಂಗ್ರೆಸ್ ಪಕ್ಷ ಮಾತ್ರ ಸಮಾಜದಲ್ಲಿ ಸಾಮಾಜಿಕ ನ್ಯಾಯ , ಜಾತ್ಯಾತೀತ ತತ್ವ, ಸಂವಿಧಾನ, ಪ್ರಜಾಪ್ರಭುತ್ವಗಳಲ್ಲಿ ಅಪಾರವಾದ ನಂಬಿಕೆ ಇಟ್ಟು ಅದರಂತೆ ನಡೆಯುವ ಪಕ್ಷ ಎಂದರು.
ಬಿಜೆಪಿಗೆ ಕೇಂದ್ರೀಕೃತ ವ್ಯವಸ್ಥೆಯಲ್ಲಿ ನಂಬಿಕೆ ಇದೆ
ಈಗ ಅಧಿಕಾರದಲ್ಲಿರುವ ಬಿಜೆಪಿ ಇದಕ್ಕೆ ತದ್ವಿರುದ್ಧವಾಗಿರುವ ಪಕ್ಷ. ಬಡವರ ಪರವಾಗಿ, ಸಾಮಾಜಿಕ ನ್ಯಾಯದ ಪರವಾಗಿ ಇರಲು ಸಾಧ್ಯವೇ ಇಲ್ಲ. ಸಂವಿಧಾನದ ಬಗ್ಗೆ ಗೌರವ ಇಲ್ಲ. ಸಂವಿಧಾನ ಬದಲಾಗಬೇಕೆಂದು ಬಯಸುವ ಪಕ್ಷ. ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ನಮಗೆ ಅಧಿಕಾರ ವಿಕೇಂದ್ರೀಕರಣದಲ್ಲಿ ನಂಬಿಕೆಯಿದ್ದರೆ, ಬಿಜೆಪಿಗೆ ಕೇಂದ್ರೀಕೃತ ವ್ಯವಸ್ಥೆಯಲ್ಲಿ ನಂಬಿಕೆ ಇದೆ ಎಂದು ವಿವರಿಸಿದರು.
ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಆರ್ಥಿಕ ಅಧಿಕಾರ ಕೇಂದ್ರೀಕೃತಗೊಳ್ಳುತ್ತಿದೆ. ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಇಲ್ಲದೇ ಹೋಗಿದ್ದರೆ ಈ ದೇಶದಲ್ಲಿ ಅಧಿಕಾರ ವಿಕೇಂದ್ರೀಕರಣ ಆಗಲು ಸಾಧ್ಯವಾಗುತ್ತಿರಲಿಲ್ಲ.
ಸಂಸತ್ತಿನಲ್ಲಿ ಮಹಿಳೆಯರಿಗೆ 50% ಮೀಸಲಾತಿ ನೀಡಲು ನಮ್ಮ ತಕರಾರೇನಿಲ್ಲ, ನಾವೇ ಇದನ್ನು ಜಾರಿಗೆ ತರಬೇಕು ಎಂದರು. ಜಿಲ್ಲಾ ಪಂಚಾಯತಿ, ಪಟ್ಟಣ ಪಂಚಾಯತಿಗಳಲ್ಲಿ 50% ಮೀಸಲಾತಿ ಇದೆ. ಮಹಿಳೆಯರಿಗೆ ಸಮಾನ ಅವಕಾಶಗಳು ದೊರಕಬೇಕು ಎಂದರು. ಸಂಸತ್ತು, ವಿಧಾನ ಸಭೆಯಲ್ಲಿಯೂ ಮೀಸಲಾತಿ ನೀಡಲು ನಮ್ಮ ತಕರಾರು ಇಲ್ಲ ಎಂದರು.
ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡುತ್ತೇವೆ ಎಂದು ಮಾದ್ಯಮಗಳು ಬರೆದಿವೆ, ಆದರೆ ಅರ್ಹರಿಗೆ ಬಿಪಿಎಲ್ ಕಾರ್ಡ್ ತಪ್ಪಬಾರದು ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಅವರಿಗೆ ಸೂಚಿಸಲಾಗಿದೆ. ಎಲ್ಲಾ ಬಡವರಿಗೂ ಸೌಲಭ್ಯ ದೊರಕಬೇಕು. ಅನರ್ಹರಿಗೆ ಮಾತ್ರ ಎಪಿಎಲ್ ಕಾರ್ಡು ನೀಡಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
ಕಾಂಗ್ರೆಸ್ ಪಕ್ಷ ಈ ಬಿಜೆಪಿಯವರಿಂದ ಪಾಠ ಕಲಿಯಬೇಕಾದ ಅಗತ್ಯವಿಲ್ಲ. ಅವರು ಯಾವತ್ತೂ ಶ್ರೀಮಂತರ, ಮೇಲ್ಜಾತಿಯವರ ಪರ. 1925 ರಲ್ಲಿ ಆರ್.ಎಸ್.ಎಸ್ ಪ್ರಾರಂಭವಾಯಿತು. ಅಂದಿನಿಂದ ಇಂದಿನವರೆಗೆ ಪ್ರಜಾಪ್ರಭುತ್ವ, ಮೀಸಲಾತಿ, ಸಂವಿಧಾನದ ಪರವಾಗಿ ಮಾತನಾಡಿಲ್ಲ ಎಂದು ಹೇಳಿದರು.