ತಿರುವನಂತಪುರಂ,ನ.19(DaijiworldNews/TA):ಮಂಗಳವಾರ ಮುಂಜಾನೆ ಕೇರಳದ ವಯನಾಡಿನ ತಿರುನೆಲ್ಲಿ ಬಳಿ ಶಬರಿಮಲೆ ದೇವಸ್ಥಾನದಿಂದ ಭಕ್ತರಿದ್ದ ಬಸ್ ಪಲ್ಟಿಯಾದ ಪರಿಣಾಮ ಇಪ್ಪತ್ತೇಳು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಬಸ್ನಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಕರ್ನಾಟಕಕ್ಕೆ ಸೇರಿದ 45 ಜನರು ಇದ್ದರು. ಶಬರಿಮಲೆ ದೇಗುಲಕ್ಕೆ ಭೇಟಿ ನೀಡಿದ ಬಳಿಕ ಬಸ್ ಮೈಸೂರಿನ ಹುಣಸೂರಿಗೆ ತೆರಳುತ್ತಿತ್ತು. ಬೆಳಗ್ಗೆ 6 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಭೀಕರ ಅಪಘಾತ ಸಂಭವಿಸಿದ ಕೂಡಲೇ ಗಾಯಾಳುಗಳನ್ನು ವಯನಾಡಿನ ಮಾನಂತವಾಡಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು. ಅಧಿಕಾರಿಗಳ ಪ್ರಕಾರ ಗಾಯಗೊಂಡ ಪ್ರಯಾಣಿಕರ ಸ್ಥಿತಿ ಗಂಭೀರವಾಗಿಲ್ಲ ಎಂದು ಹೇಳಲಾಗಿದೆ.
ಕಾಂಗ್ರೆಸ್ ನಾಯಕಿ ಮತ್ತು ವಯನಾಡ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ಘಟನೆಯ ಕುರಿತು ಪ್ರತಿಕ್ರಿಯಿಸಿ, "ಕರ್ನಾಟಕದ ಶಬರಿಮಲೆ ಯಾತ್ರಾರ್ಥಿಗಳನ್ನು ಒಳಗೊಂಡ ವಯನಾಡಿನಲ್ಲಿ ನಡೆದ ದುರದೃಷ್ಟಕರ ಬಸ್ ಅಪಘಾತದ ಬಗ್ಗೆ ಕೇಳಿ ನನಗೆ ತುಂಬಾ ದುಃಖವಾಗಿದೆ. ಕಷ್ಟಕಾಲದಲ್ಲಿ ಬಾಧಿತರಾದವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಎಂದು ಹೇಳಿಕೆ ನೀಡಿದ್ದಾರೆ.