ಬಾಗಲಕೋಟೆ,ನ.20(DaijiworldNews/AK): ಹೇರ್ ಡ್ರೈಯರ್ ಸ್ಫೋಟಗೊಂಡು ಮೃತ ಯೋಧನ ಪತ್ನಿಯ ಎರಡೂ ಹಸ್ತಗಳು ಛಿದ್ರಗೊಂಡ ಘಟನೆ ಇಳಕಲ್ ನಗರದಲ್ಲಿ ನಡೆದಿದೆ.
ಮೃತ ಯೋಧ ಪಾಪಣ್ಣ ಅವರ ಪತ್ನಿ ಬಸಮ್ಮ ಯರನಾಳ ಗಾಯಗೊಂಡವರು. ಶಶಿಕಲಾ ಎಂಬುವರ ಮನೆಗೆ ಹೇರ್ ಡ್ರೈಯರ್ ಪಾರ್ಸಲ್ ಮೂಲಕ ಬಂದಿತ್ತು. ಪಾರ್ಸಲ್ ಮೇಲೆ ಶಶಿಕಲಾ ಅವರ ಮೊಬೈಲ್ ನಂಬರ್ ಇದ್ದ ಹಿನ್ನೆಲೆಯಲ್ಲಿ ಡಿಟಿಡಿಸಿ ಕೊರಿಯರ್ ಸಿಬ್ಬಂದಿ ಶಶಿಕಲಾ ಅವರಿಗೆ ಕರೆ ಮಾಡಿ, ನಿಮ್ಮ ಹೆಸರಿಗೆ ಪಾರ್ಸಲ್ ಬಂದಿದೆ. ಕಲೆಕ್ಟ್ ಮಾಡಿ ಎಂದಿದ್ದಾನೆ. ಈ ವೇಳೆ ಶಶಿಕಲಾ ನಾನು ಬೇರೆ ಊರಿನಲ್ಲಿದ್ದೇನೆ ಎಂದು ಹೇಳಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಕೋರಿಯರ್ ಸಿಬ್ಬಂದಿ, ಪದೇ ಪದೇ ಕರೆ ಮಾಡಿದ್ದಾನೆ. ಹೀಗಾಗಿ ಶಶಿಕಲಾ ಅವರು ತಮ್ಮ ಸ್ನೇಹಿತೆ ಬಸಮ್ಮಾ ಅವರಿಗೆ ಕರೆ ಮಾಡಿ ಯಾವುದೋ ಪಾರ್ಸಲ್ ಬಂದಿದೆ ತೆಗೆದುಕೊ ಎಂದು ಹೇಳಿದ್ದಾರೆ. ಆಗ, ಬಸಮ್ಮಾ ಅವರು ಕೊರಿಯರ್ ಸಿಬ್ಬಂದಿ ಬಳಿ ಪಾರ್ಸಲ್ ಪಡೆದಿದ್ದಾರೆ. ಪಾರ್ಸಲ್ ತೆರದು ನೋಡಿದಾಗ ಒಳಗಡೆ ಹೇರ್ ಡ್ರೈಯರ್ ಇತ್ತು. ಇದೇ ವೇಳೆ ಅಲ್ಲೇ ಇದ್ದ ಪಕ್ಕದ ಮನೆಯವರು ಆನ್ ಮಾಡಿ ತೋರಿಸಿ ಎಂದಿದ್ದಾರೆ. ಬಸಮ್ಮಾ ಅವರು ಹೇರ್ ಡ್ರೈಯರ್ ಸ್ವಿಚ್ ಹಾಕಿ ಆನ್ ಮಾಡಿದಾಗ ಸ್ಫೋಟಗೊಂಡಿದೆ.
ಹೇರ್ ಡ್ರೈಯರ್ ಸ್ಫೋಟದಿಂದ ಬಸಮ್ಮ ಅವರ ಹಸ್ತಗಳು ಛಿದ್ರಗೊಂಡಿದೆ. ಬೆರಳುಗಳು ತುಂಡಾಗಿ ಬಿದ್ದಿವೆ. ಮನೆಯಲ್ಲ ರಕ್ತಮಯವಾಗಿದೆ. ಕೂಡಲೇ ಬಸಮ್ಮ ಅವರನ್ನು ಇಳಕಲ್ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಳಕಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.