ಬೆಂಗಳೂರು,ನ.21(DaijiworldNews/AK): ಮುಖ್ಯಮಂತ್ರಿಗಳು ತಮ್ಮ ಮೇಲಿನ ಆರೋಪ, ತಮ್ಮ ಸರಕಾರದ ದುರಾಡಳಿತ, ಭ್ರಷ್ಟಾಚಾರ- ಇವೆಲ್ಲವನ್ನೂ ಮರೆಮಾಚಲು ಅಥವಾ ಬೇರೆಡೆಗೆ ತಿರುಗಿಸಲು ನಬಾರ್ಡ್ ಮತ್ತಿತರ ಆರೋಪ ಮಾಡುತ್ತಲೇ ಬಂದಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಆಕ್ಷೇಪಿಸಿದರು.
ನವದೆಹಲಿಯಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಬಾರ್ಡ್ ವಿಷಯಕ್ಕೆ ಸಂಬಂಧಿಸಿ ಮಾಹಿತಿ ನೀಡಿದರು. ಕರ್ನಾಟಕಕ್ಕೆ ಮಾತ್ರ ಸಮಸ್ಯೆ ಆಗಿದೆ ಎಂದು ಸಿದ್ದರಾಮಯ್ಯನವರು ಹೇಳುತ್ತಿದ್ದಾರೆ. ಗುಜರಾತ್ನಲ್ಲಿ ಕೃಷಿ ಕ್ಷೇತ್ರಕ್ಕೆ ನಬಾರ್ಡ್ ಮೊತ್ತ ಕಳೆದ ಬಾರಿ 1,800 ಕೋಟಿ ಸಾಲ ಇದ್ದುದು ಈ ಬಾರಿ 1,070 ಕೋಟಿ ಆಗಿದೆ. ನಮ್ಮದೇ ಸರಕಾರ ಇರುವ ರಾಜಸ್ಥಾನದಲ್ಲಿ ಕಳೆದ ಬಾರಿ 4,792 ಕೋಟಿ ರೂ. ಇದ್ದುದು ಈ ಸಾರಿ 2,070 ಕೋಟಿಗೆ ಇಳಿದಿದೆ. ಉತ್ತರ ಪ್ರದೇಶದಲ್ಲಿ ಕಳೆದ ಬಾರಿ 2,700 ಕೋಟಿ ಇತ್ತು. ಈ ಬಾರಿ 920 ಕೋಟಿ ಆಗಿದೆ ಎಂದು ಮಾಹಿತಿ ಕೊಟ್ಟರು. ಕರ್ನಾಟಕದಲ್ಲಿ ಕಳೆದ ಬಾರಿ 5,600 ಕೋಟಿ ಇದ್ದುದು ಈ ಬಾರಿ 2,340 ಕೋಟಿ ಆಗಿದೆ ಎಂದು ತಿಳಿಸಿದರು.
ನಬಾರ್ಡ್ ಸಹಕಾರ ರಂಗಕ್ಕೆ ಕೃಷಿ ಸಾಲವನ್ನು ಕೊಡಬೇಕಿದೆ. ಅದರ ಕುರಿತು ಚರ್ಚೆ ಆಗುತ್ತಿದೆ ಎಂದು ವಿವರಿಸಿದರು. ನಬಾರ್ಡ್ನವರು ಕೋ ಆಪರೇಟಿವ್ ಗಳಿಗೆ ಹಣಕಾಸು ನೀಡಿ, ಅವುಗಳು ಆದ್ಯತಾ ರಂಗ ಅಂದರೆ ಕೃಷಿ ಕ್ಷೇತ್ರಕ್ಕೆ ಸಾಲ ಕೊಡುವ ವ್ಯವಸ್ಥೆಯ ಕುರಿತು ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲ ಎಂದಲ್ಲ ಎಂದು ತಿಳಿಸಿದರು.
ನಬಾರ್ಡ್ ಸಾಲ ನೀಡಿಕೆ ವಿಷಯದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗಿನಿಂದಲೂ ವ್ಯವಸ್ಥೆಯೊಂದು ಜಾರಿಯಲ್ಲಿದೆ. ರಾಷ್ಟ್ರೀಕೃತ ಬ್ಯಾಂಕ್, ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್, ಖಾಸಗಿ ರಂಗದ ಬ್ಯಾಂಕ್ಗಳು ಶೇ 40ರಷ್ಟು ಸಾಲವನ್ನು ಕೃಷಿಗೆ ಕೊಡಬೇಕಾಗುತ್ತದೆ. ಉದಾ- ಕೆನರಾ ಬ್ಯಾಂಕ್ ಕೃಷಿ ಕ್ಷೇತ್ರಕ್ಕೆ ಶೇ 40 ಸಾಲ ಕೊಡದೆ ಇದ್ದರೆ, ಆ ಮೊತ್ತವನ್ನು ರಿಸರ್ವ್ ಬ್ಯಾಂಕ್ ಪಡೆದು ಅದನ್ನು ನಬಾರ್ಡಿಗೆ ಕೊಡುತ್ತದೆ ಎಂದು ವಿವರ ನೀಡಿದರು. ನಬಾರ್ಡ್ ಆ ಮೊತ್ತವನ್ನು ರಾಜ್ಯದ ಸಹಕಾರ ಬ್ಯಾಂಕ್ ಮೂಲಕ ಸಹಕಾರಿ ಸಂಸ್ಥೆಗಳು, ಸೊಸೈಟಿಗಳಿಗೆ ಕೊಡುತ್ತದೆ ಎಂದರು.
ಎಲ್ಲ ಬ್ಯಾಂಕ್ಗಳು ಆದ್ಯತಾ ರಂಗವಾದ ಕೃಷಿಗೆ ನಿಗದಿತ ಮೊತ್ತವನ್ನು ಸಾಲವಾಗಿ ಕೊಟ್ಟಿದ್ದರೆ, ಸಹಜವಾಗಿ ನಬಾರ್ಡಿಗೆ ರಿಸರ್ವ್ ಬ್ಯಾಂಕ್ ಕೊಡುವ ಮೊತ್ತ ಕಡಿಮೆಯಾಗುತ್ತದೆ. ಈ ವ್ಯವಸ್ಥೆ ಗೊತ್ತಿರುವ ಸಿದ್ದರಾಮಯ್ಯನವರು ಇದನ್ನು ಮೆಚ್ಚಬೇಕಿತ್ತು. ತಳಹಂತದ ಸಾಲ (ಗ್ರೌಂಡ್ ಲೆವೆಲ್ ಕ್ರೆಡಿಟ್) ಕರ್ನಾಟಕದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 8 ಇದ್ದುದು 8.15 ಆಗಿದೆ. ಇದರಿಂದ ದೇಶಾದ್ಯಂತ ನಬಾರ್ಡ್ ಹಣಕಾಸಿನ ಲಭ್ಯತೆ ಕಡಿಮೆ ಆಗಲು ಕಾರಣ ಎಂದು ವಿಶ್ಲೇಷಿಸಿದರು.