ಬೆಂಗಳೂರು,ನ.22(DaijiworldNews/AK): ವಕ್ಫ್ ವಿಚಾರವಾಗಿ ಜನರು ದಂಗೆ ಏಳುವ ಪರಿಸ್ಥಿತಿ ಕರ್ನಾಟಕದಲ್ಲಿದೆ; ಆದರೆ, ಸಿದ್ದರಾಮಯ್ಯನವರು ಪಿಟೀಲು ಬಾರಿಸಿಕೊಂಡು ಕುಳಿತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಟೀಕಿಸಿದರು.
ವಕ್ಫ್ ಮಂಡಳಿಯಿಂದ ರೈತರ ಜಮೀನು ಕಬಳಿಕೆ”ಯನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಫ್ರೀಡಂ ಪಾರ್ಕ್ನಲ್ಲಿ ಇಂದು ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ರೈತರ ಜಮೀನು ಕಿತ್ತುಕೊಳ್ಳುವುದು ಕಾಂಗ್ರೆಸ್ ಸಚಿವರಿಗೆ ಸಣ್ಣ ವಿಚಾರ ಎನಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಏನೂ ಇಲ್ಲ ಎನ್ನುತ್ತಾರೆ. ಹಾಗಿದ್ದರೆ ಏನೂ ಇಲ್ಲದೆ ಹೋರಾಟಗಳು ನಡೆಯುತ್ತಿವೆಯೇ? ಮಠ, ಮಂದಿರಗಳ ಪ್ರಮುಖರೂ ಹೋರಾಟಕ್ಕೆ ಬಂದಿದ್ದಾರೆ. ಬಿಜೆಪಿಯಿಂದ, ರೈತರಿಂದ ಇವತ್ತು ರಾಜ್ಯಾದ್ಯಂತ ಹೋರಾಟ ನಡೆಯುತ್ತಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ಮುಸ್ಲಿಮರ ಓಲೈಕೆ ಮಾಡುತ್ತಾರೆ. ಡಿಜೆ ಹಳ್ಳಿ- ಕೆಜಿಹಳ್ಳಿ, ಹುಬ್ಬಳ್ಳಿ ಕೇಸುಗಳನ್ನು ವಾಪಸ್ ಪಡೆದಿದ್ದಾರೆ ಎಂದು ಟೀಕಿಸಿದರು.
ಹಿಂದೂ ಹೆಣ್ಮಕ್ಕಳನ್ನು ಅಪಹರಿಸುವ ಲವ್ ಜಿಹಾದ್ ಎಂಬ ಹೀನ ಕಾರ್ಯಕ್ಕೆ ಕಾಂಗ್ರೆಸ್ ಕುಮ್ಮಕ್ಕು ಕೊಡುತ್ತಿದೆ. ಇವರು ಬಂದಾಗ ಇಂಥವು ಜಾಸ್ತಿ ಆಗುತ್ತದೆ. ನಾವು ಅಧಿಕಾರದಲ್ಲಿ ಇದ್ದಾಗ ಕರ್ನಾಟಕದಲ್ಲಿ ಒಬ್ಬ ನಕ್ಸಲ್ ಇರಲಿಲ್ಲ. ಈಗ ನಕ್ಸಲರ ಸಮಸ್ಯೆ ಉಂಟಾಗಿದೆ ಎಂದು ಗಮನ ಸೆಳೆದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಕ್ಸಲರಿಗೆ ಹಬ್ಬ; ಲವ್ ಜಿಹಾದ್ ಮಾಡುವವರಿಗೆ ಹಬ್ಬ. ಇದು ಲ್ಯಾಂಡ್ ಜಿಹಾದ್. ಲವ್ ಜಿಹಾದ್ ಆಯ್ತು; ಲ್ಯಾಂಡ್ ಜಿಹಾದ್ ಬಂತು ಎಂದು ಟೀಕಿಸಿದರು.
ಶ್ರೀರಂಗಪಟ್ಟಣದಲ್ಲಿ 400 ವರ್ಷ ಹಳೆಯ ದೇವಸ್ಥಾನ ಇದೆ. ಅಲ್ಲಿ ಮುಸ್ಲಿಮರ ಮನೆ ಇಲ್ಲ; ಮಸೀದಿಯೂ ಇಲ್ಲ. ಆದರೆ, ಆ ದೇವಸ್ಥಾನದ ಪಹಣಿಯಲ್ಲಿ ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.ನಮ್ಮ ಆಸ್ತಿ, ನಮ್ಮ ಹಕ್ಕು ಘೋಷವಾಕ್ಯದಡಿ ಹೋರಾಟ ನಡೆಯುತ್ತಿದೆ. ನಮ್ಮ ತೆರಿಗೆ ನಮ್ಮ ಹಕ್ಕು ಹೆಸರಿನಲ್ಲಿ ನಮ್ಮ ಜಯನಗರದ ಶಾಸಕರೂ ಹೋರಾಟ ಮಾಡುತ್ತಿದ್ದಾರೆ. ಅವರಿಗೆ ಉಪ ಮುಖ್ಯಮಂತ್ರಿ, ‘ತಗ್ಗಿ ಬಗ್ಗಿ ನಡೆಯಬೇಕು’ ಎಂದು ಪಾಳೇಗಾರಿಕೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.