ಮಂಡ್ಯ, ನ.22(DaijiworldNews/AK):ರಾಜ್ಯದ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲವಿತರಿಸುವ ಸಹಕಾರ ಸಂಘಗಳಿಗೆ ನೀಡಲಾಗುವ ಸಾಲದ ಮೊತ್ತವನ್ನು ನಬಾರ್ಡ್ ಬ್ಯಾಂಕ್ ಕಡಿತಗೊಳಿಸಿರುವುದು ರೈತ ವಿರೋಧಿ ನಿಲುವಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ರಾಷ್ಟ್ರದ ರೈತರಿಗೆ ನೆರವಾಗಬೇಕಿದ್ದ ಕೇಂದ್ರ ಸರ್ಕಾರ ಸಾಲದ ಮೊತ್ತವನ್ನು ಶೇ 50ರಷ್ಟು ಕಡಿತಗೊಳಿಸಿ ರೈತ ವಿರೋಧಿ ನಿಲುವು ತಾಳಿದೆ.ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇ ಲ್ ವಿರುದ್ದ ಹೋರಾಟ ನಡೆಸಿದ್ದ ದೇವೇಗೌಡರು ಪ್ರಧಾನಿ ನರೇಂದ್ರ ಮೋದಿಯವರು ರೈತ ವಿರೋಧಿ ನಿಲುವಿನ ಬಗ್ಗೆ ಏಕೆ ಮೌನ ವಹಿಸಿದ್ದಾರೆ? ಈ ಬಗ್ಗೆ ಕೇಂದ್ರ ಸಚಿವರಾದ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೌನವಾಗಿರುವ ಗುಟ್ಟೇನು? ಎಂದು ವಾಗ್ದಾಳಿ ನಡೆಸಿದರು.
ಕಳೆದ ವರ್ಷ ರಾಜ್ಯಕ್ಕೆ 5,600 ಕೋಟಿ ರೂ.ಬೆಳೆ ಸಾಲ ಬಿಡುಗಡೆಯಾಗಿತ್ತು. ಆದರೆ ಈ ಬಾರಿ 2,340 ಕೋಟಿ ರೂ. ಬಿಡುಗಡೆಗೊಳಿಸಿ ಕೇಂದ್ರ ಸರ್ಕಾರ ರಾಜ್ಯಕ್ಕೆ ದ್ರೋಹ ಬಗೆದಿದೆ ಎಂದು ಕಿಡಿಕಾರಿದರು.