ಮುಂಬೈ, ನ.23(DaijiworldNews/AA): ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಇನ್ನು ಜಾರ್ಖಂಡ್ನ 81 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಮತ ಎಣಿಕೆ ಕಾರ್ಯ ಶುರುವಾಗಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನಾ ಹಾಗೂ ಎನ್ಸಿಪಿ ನೇತೃತ್ವದ ಮಹಾಯುತಿ ಬಣ ಹಾಗೂ ಕಾಂಗ್ರೆಸ್, ಶಿವಸೇನಾ (ಯುಬಿಟಿ) ಮತ್ತು ಎನ್ಸಿಪಿ (ಎಸ್ಪಿ) ಪಕ್ಷಗಳ ಮಹಾ ವಿಕಾಸ ಅಘಾಡಿ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಜೊತೆಗೆ ಜಾರ್ಖಂಡ್ನಲ್ಲಿ ಕಾಂಗ್ರೆಸ್ ಹಾಗೂ ಜೆಎಂಎಂ ಮೈತ್ರಿ ಮತ್ತು ಬಿಜೆಪಿ ನೇತೃತ್ವದ ಎನ್ಡಿಎ ವಿರುದ್ಧ ನೇರ ಸ್ಪರ್ಧೆ ನಡೆದಿದೆ.
ಸದ್ಯ ಮಹಾರಾಷ್ಟ್ರದಲ್ಲಿ ಏಕನಾಥ ಶಿಂದೆ, ಆದಿತ್ಯ ಠಾಕ್ರೆ, ದೇವೇಂದ್ರ ಫಡಣವೀಸ್ಗೆ ಮುನ್ನಡೆ ಲಭಿಸಿದೆ. ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟವು 114 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಮಹಾ ವಿಕಾಸ ಅಘಾಡಿಯು 83 ಕ್ಷೇತ್ರಗಳಲ್ಲಿ ಮುಂದಿದೆ. ಜಾರ್ಖಂಡ್ನಲ್ಲಿ ಎನ್ಡಿಎ 35 ಕ್ಷೇತ್ರಗಳಲ್ಲಿ ಹಾಗೂ ಇಂಡಿಯಾ ಬಣಕ್ಕೆ 31 ಕ್ಷೇತ್ರಗಳಲ್ಲಿ ಮುನ್ನಡೆ ಲಭಿಸಿದೆ.
ಇತ್ತೀಚೆಗಷ್ಟೇ ಮಹಾರಾಷ್ಟ್ರ ಹಾಗೂ ಜಾರ್ಖಂಡ್ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತದಾನ ನಡೆದಿತ್ತು. ಗೆಲುವು ಯಾವ ಪಕ್ಷದ್ದಾಗಲಿದೆ ಹಾಗೂ ಅಧಿಕಾರದ ಚುಕ್ಕಾಣಿ ಯಾರು ಹಿಡಿಯಲಿದ್ದಾರೆ ಎಂಬುದಕ್ಕೆ ಇಂದು ಉತ್ತರ ದೊರೆಯಲಿದೆ.