ಚನ್ನಪಟ್ಟಣ, ನ.23(DaijiworldNews/AA): ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಹಾಗೂ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರ ಪ್ರತಿಷ್ಠೆಗೆ ಅವರ ಮಗ ನಿಖಿಲ್ ಬಲಿಯಾಗಿದ್ದಾರೆ. ಅವರಿಬ್ಬರೂ ತಮ್ಮ ಪ್ರತಿಷ್ಠೆಗೆ ಮಗನನ್ನೇ ಬಲಿಕೊಟ್ಟಿದ್ದಾರೆ ಎಂದು ಸಿ.ಪಿ ಯೋಗೇಶ್ವರ್ ತಿಳಿಸಿದ್ದಾರೆ.
ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಮನಸು ಮಾಡಿದ್ದರೆ ಮಗನನ್ನು ಮಂಡ್ಯದಲ್ಲಿ ಲೋಕಸಭೆ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಬಹುದಿತ್ತು. ಆದರೆ, ಕೇಂದ್ರ ಸಚಿವರಾಗುವ ತವಕದಿಂದ ತಾವೇ ಅಲ್ಲಿ ಸ್ಪರ್ಧಿಸಿದರು. ಮಗನನ್ನು ಬಲಿಕೊಟ್ಟರು ಎಂದು ಹೇಳಿದ್ದಾರೆ.
ದೇವೇಗೌಡರು ದೈತ್ಯ ಶಕ್ತಿ ಎಂದು ಬಹಳ ಹಿಂದಿನಿಂದಲೂ ಹೇಳುತ್ತಾ ಬಂದಿದ್ದೇನೆ. ಅದು ಸತ್ಯ. ಆದರೆ, ಅವರಿಗೆ ವಯಸ್ಸಾಗಿದೆ. ಈ ಕಾರಣದಿಂದ ಅವರನ್ನು ಜನ ಚುನಾವಣೆಯಲ್ಲಿ ತಿರಸ್ಕರಿಸಿದ್ದಾರೆ. ಹೀಗಾಗಿ ಅವರಿಗೆ ವಿಶ್ರಾಂತ ಜೀವನ ನಡೆಸಲು ಇದು ಸೂಕ್ತ ಕಾಲ. ಈ ಚುನಾವಣೆ ಫಲಿತಾಂಶ ಜೆಡಿಎಸ್ ಕೊನೆಯ ಕ್ಷಣಗಳನ್ನು ಎಣಿಸುತ್ತಿದೆ ಎಂಬುದರ ಸಂಕೇತ ಎಂದರು.
ಡಿಕೆ ಸಹೋದರರ ಸಹಕಾರಕ್ಕೆ ಯೋಗೇಶ್ವರ್ ಅವರು ಧನ್ಯವಾದ ಸಮರ್ಪಿಸಿದ ಅವರು, ಹಿಂದೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಡಾ. ಮಂಜುನಾಥ್ ಪರ ಕೆಲಸ ಮಾಡಿದ್ದೆ. ಅದರಿಂದಾಗಿ ಡಿಕೆ ಸುರೇಶ್ಗೆ ಸೋಲಾಗಿತ್ತು. ಆದರೆ, ಈ ಚುನಾವಣೆಯಲ್ಲಿ ಅದೇ ಡಿಕೆ ಸುರೇಶ್ ಹೆಗಲಿಗೆ ಹೆಗಲು ಕೊಟ್ಟು ನನ್ನನ್ನು ಗೆಲ್ಲಿಸಿದರು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.