ತಿರುವನಂತಪುರಂ, ನ.23(DaijiworldNews/AK):ವಯನಾಡ್ ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ ಹಾಗೂ ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರು ಇದೇ ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಮೊದಲ ಚುನಾವಣೆಯಲ್ಲೇ ದಾಖಲೆಯ ಮತ ಪಡೆಯುವ ಮೂಲಕ ವಯನಾಡ್ ಲೋಕಸಭೆ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಈ ಕ್ಷೇತ್ರದಲ್ಲಿ ಒಟ್ಟು 16 ಜನ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಈ ಭಾಗದಲ್ಲಿ ಮೊದಲಿನಿಂದಲೂ ಜನ ಭಾರೀ ಬೆಂಬಲ ಸೂಚಿಸಿದ್ದರು. ಇದೀಗ ಅವರು ವಯನಾಡ್ನಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಇನ್ನು ಪ್ರಿಯಾಂಕಾ ಗಾಂಧಿ ಅವರು ಬರೋಬ್ಬರಿ 2 ಲಕ್ಷಗಳ ಮತಗಳ ಅಂತರವನ್ನು ಬೆಳಿಗ್ಗೆ ದಾಖಲಿಸಿದ್ದರು.
ವಯನಾಡ್ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಅವರ ಗೆಲುವು ಕಾಂಗ್ರೆಸ್ನಲ್ಲಿ ಹಾಗೂ ರಾಹುಲ್ಗಾಂಧಿ ಕುಟುಂಬದಲ್ಲಿ ಸಂತೋಷವನ್ನು ಉಂಟು ಮಾಡಿದೆ.. ಪ್ರಿಯಾಂಕಾ ಗಾಂಧಿ ಅವರು ಲೋಕಸಭೆಯನ್ನು ಪ್ರವೇಶಿಸುವ ಮೂಲಕ ಒಂದೇ ಕುಟುಂಬದ ಮೂರು ಜನ ಲೋಕಸಭೆಯನ್ನು ಪ್ರವೇಶಿಸಿದಂತೆ ಆಗಿದೆ. ಇನ್ನು ಸೋನಿಯಾ ಗಾಂಧಿ ಅವರು ರಾಜ್ಯಸಭಾ ಸದಸ್ಯರಾಗಿದ್ದು, ಒಂದೇ ಕುಟುಂಬದ ಮೂರು ಜನ ರಾಷ್ಟ್ರ ರಾಜಕೀಯದಲ್ಲಿ ಮಿಂಚಲಿದ್ದಾರೆ.
ವಯನಾಡ್ ಉಪಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ 4.08 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. 2019 ರ ಚುನಾವಣೆಯಲ್ಲಿ ವಯನಾಡ್ನಿಂದ 4.30 ಲಕ್ಷ ಮತಗಳ ಅಂತರದಿಂದ ಗೆದ್ದ ರಾಹುಲ್ ಗಾಂಧಿ, ಏಪ್ರಿಲ್ 2024 ರ ಚುನಾವಣೆಯಲ್ಲಿ 3.64 ಲಕ್ಷ ಅಂತರದಿಂದ ಗೆದ್ದಾಗ ಅವರ ಅಂತರದ ಕುಸಿತವನ್ನು ಕಂಡರು.