ಕೋಲಾರ, ನ.23(DaijiworldNews/AA): ರಾಜ್ಯದ ಜನ ಕಾಂಗ್ರೆಸ್ ಪರವಾಗಿದ್ದಾರೆ. ಗ್ಯಾರಂಟಿಗಳಿಂದ ನಮಗೆ ಆಶೀರ್ವದಿಸಿದ್ದಾರೆ. ನಮ್ಮ ಕಾರ್ಯಕ್ರಮಗಳು, ಯೋಜನೆಗಳನ್ನು ನೋಡಿ ಮತ ನೀಡಿದ್ದಾರೆ. ಜನ ನಮ್ಮ ಪರವಾಗಿದ್ದಾರೆ ಅನ್ನೋದು ಈ ಫಲಿತಾಂಶದಿಂದ ಗೊತ್ತಾಗಿದೆ ಎಂದು ಸಚಿವ ಕೆಹೆಚ್ ಮುನಿಯಪ್ಪ ತಿಳಿಸಿದ್ದಾರೆ.
ಕೋಲಾರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಎಷ್ಟೇ ಬೊಬ್ಬೆ ಹಾಕಿದರೂ ಕೆಲಸ ಮಾಡಿಲ್ಲ. ರಾಜಕೀಯವಾಗಿ ಬೇರೆ ಬೇರೆ ಮಾತನಾಡುತ್ತಾರೆ. ಬಿಜೆಪಿ ವಿರೋಧ ಪಕ್ಷ ಮಾರ್ಗಸೂಚಿ ನೀಡುತ್ತಾ ಟೀಕೆ ಮಾಡಬೇಕಿತ್ತು. ಆದರೆ ಅವರು ಸುಖಾಸುಮ್ಮನೆ ಆರೋಪಗಳನ್ನು ಮಾಡುತ್ತಾ ಲೋಪ ದೋಷಗಳನ್ನು ತಿಳಿಸಿಲ್ಲ. ವಿರೋಧ ಪಕ್ಷ ವ್ಯವಸ್ಥಿತವಾಗಿ ಕೆಲಸ ಮಾಡಲಿ. ಅವರ ಕಾರ್ಯ ವೈಖರಿ ಬದಲಾಗಲಿ ಎಂದರು.
ಮೂರಕ್ಕೆ ಮೂರು ಗೆಲ್ಲುತ್ತೇವೆ ಎಂದು ಮೊದಲೇ ಹೇಳಿದ್ದೆ. ಕಾಂಗ್ರೆಸ್ ಯೋಜನೆಗಳಿಂದ ಗೆಲುವು ನಮ್ಮದಾಗಿದೆ. ಈ ಕ್ರೆಡಿಟ್ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸೇರಬೇಕು. ಸ್ವತಂತ್ರ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ದಿಟ್ಟ ಹೆಜ್ಜೆ ಇಟ್ಟಿದ್ದು ನಮ್ಮ ಸರ್ಕಾರ ಎಂದು ಹರ್ಷ ವ್ಯಕ್ತಪಡಿಸಿದರು.