ಗದಗ, ನ.23(DaijiworldNews/AK): ಕರ್ನಾಟಕ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಜಾಗೃತ ಮತದಾರರು ಬಿಜೆಪಿಗೆ ತಕ್ಕ ಕಪಾಳಮೋಕ್ಷವನ್ನು ಈ ಉಪಚುನಾವಣೆ ಮೂಲಕ ಮಾಡಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ ಪಾಟೀಲ್ ಹೇಳಿದ್ದಾರೆ.
ಇಂದು (ಶನಿವಾರ) ನಗರದ ಕಾಟನ್ ಸೇಲ್ ಸೊಸೈಟಿ ಆವರಣದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಚುನಾವಣೆ ಫಲಿತಾಂಶ ಬಹಳ ಮಹತ್ವದ್ದಾಗಿತ್ತು. ಕಳೆದ ಮೂರು ತಿಂಗಳಿಂದ ನಡೆದ ಹಲವಾರು ರಾಜಕೀಯ ಬೆಳವಣಿಗೆಗೆ ಉತ್ತರ ಕೊಡಬೇಕಾಗಿತ್ತು. ಆ ಉತ್ತರವನ್ನು ಜನ ಸಮರ್ಪಕವಾಗಿ ಕೊಟ್ಟಿದ್ದಾರೆ ಎಂದರು.
ಬಿಜೆಪಿಯವರ ಮುಖಕ್ಕೆ ಮಂಗಳಾರತಿ ಮಾಡಿದ್ದಾರೆ. ಚುನಾವಣೆ ಘೋಷಣೆ ಆಗುತ್ತಿದ್ದಂತೆ, ರಾಜ್ಯದಲ್ಲಿ ಸುಳ್ಳು ಪ್ರಚಾರ ನಡೆದವು. ನಮ್ಮ ಸಮಾಜವನ್ನು ಒಡೆಯುವ ದೊಡ್ಡ ಹುನ್ನಾರ, ಕುಕೃತ್ಯ ಮಾಡುವ ಎಲ್ಲಾ ರೀತಿಯ ರಾಜಕೀಯ ನಿಲುವು ಹಾಗೂ ದಾಳ ಬಳಸುವ ಕೆಲಸ ಬಿಜೆಪಿ ಮಾಡಿತು ಎಂದು ಹರಿಹಾಯ್ದರು.
ಸಿದ್ದರಾಮಯ್ಯನವರನ್ನು ಏನಾದರೂ ಮಾಡಿ, ಅಶಕ್ತರನ್ನಾಗಿ ಮಾಡುವ ನಿಮ್ಮ ಕುತಂತ್ರ ನಡೆಯದಂತಾಯಿತು. ಜನತಾ ನ್ಯಾಯಾಲಯದಲ್ಲಿ ಸಿದ್ದರಾಮಯ್ಯ ಅವರು ಮತ್ತೆ ಹೀರೊ ಆಗಿ, ನಾಯಕನಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದರು.