ಥಾಣೆ,ನ.27(DaijiworldNews/AK): ನಾನು ಜನಪ್ರಿಯತೆಗಾಗಿ ಯಾವ ಕೆಲಸವನ್ನೂ ಮಾಡಲಿಲ್ಲ. ಜನರಿಗಾಗಿ ನಮ್ಮ ಸರ್ಕಾರ ಮಾಡಿದ ಕೆಲಸವೇ ನಮಗೆ ಜನಪ್ರಿಯತೆಯನ್ನು ತಂದುಕೊಟ್ಟಿತು ಎಂದು ಮಹಾರಾಷ್ಟ್ರದ ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದರು.

ಸುದ್ದಿಗೋಷ್ಟೀಯಲ್ಲಿ ಮಾತನಾಡಿದ ಅವರು, ನಾನು ಮತ್ತು ನಮ್ಮ ಸರ್ಕಾರದ ಉಪಮುಖ್ಯಮಂತ್ರಿಗಳು ದಿನದ 24 ಗಂಟೆಯೂ ಕೆಲಸ ಮಾಡಿದ್ದೇವೆ. ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ನಿರ್ಧಾರವನ್ನು ನಾವು ಪ್ರಧಾನಿ ನರೇಂದ್ರ ಮೋದಿಯವರಿಗೆ ಬಿಟ್ಟಿದ್ದೇವೆ. ಅವರು ಯಾವ ನಿರ್ಧಾರ ತೆಗೆದುಕೊಂಡರೂ ನಾವು ಅದಕ್ಕೆ ಬದ್ಧರಿದ್ದೇವೆ ಎಂದು ಹೇಳಿದ್ದಾರೆ.
ನಾನೆಂದೂ ಮುಖ್ಯಮಂತ್ರಿಯಾಗುತ್ತೇನೆ ಎಂದು ಕನಸು ಕಂಡಿರಲಿಲ್ಲ. ಕಳೆದ ಎರಡೂವರೆ ವರ್ಷಗಳಲ್ಲಿ ನಾನು ಜನಸಾಮಾನ್ಯನಂತೆ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಯತ್ನಿಸಿದ್ದೇನೆ. ನನಗೆ ಆ ಬಗ್ಗೆ ಆತ್ಮತೃಪ್ತಿಯಿದೆ. ಈ ಬಾರಿಯ ಗೆಲುವು ಜನರ ಗೆಲುವು. ನಮ್ಮ ಸರ್ಕಾರಕ್ಕೆ ನೀಡಿದ ಸಹಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದಗಳು. ಅವರ ಮಾರ್ಗದರ್ಶನದಲ್ಲಿ ಈ ಬಾರಿ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಕಾಣಲು ಸಾಧ್ಯವಾಯಿತು ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.