ಬೆಂಗಳೂರು, ನ.27(DaijiworldNews/AA): 2018ರಲ್ಲಿ ಜಿ.ಟಿ.ದೇವೇಗೌಡರನ್ನು ಕಾಂಗ್ರೆಸ್ ಸರ್ಕಾರ ಬಂಧಿಸಲು ಸಿದ್ಧತೆ ನಡೆಸಿತ್ತು. ಆಗ ಕುಮಾರಸ್ವಾಮಿ ಒಂದು ಗುಟುರು ಹಾಕಿ ಎಲ್ಲರನ್ನೂ ಓಡಿಸಿದ್ದರು ಎಂದು ಜೆಡಿಎಸ್ ನಾಯಕ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.

ಜೆಡಿಎಸ್ ಶಾಸಕರೊಂದಿಗೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2018ರಲ್ಲಿ ಇದೇ ಕಾಂಗ್ರೆಸ್ ಸರ್ಕಾರ ಇತ್ತು. ಜಿ.ಟಿ.ದೇವೇಗೌಡರನ್ನು ಬಂಧಿಸಲು ಸಿದ್ಧತೆ ನಡೆಸಲಾಗಿತ್ತು. ನಮ್ಮ ಅಭಿಮಾನಿ ಪೊಲೀಸ್ ಅಧಿಕಾರಿಯೊಬ್ಬರು ಕರೆ ಮಾಡಿ ಹೇಳಿ, ಜಿ.ಟಿ.ದೇವೇಗೌಡರನ್ನು ಬಂಧಿಸಲು ಪೊಲೀಸ್ ಅಧಿಕಾರಿಗಳ ತಂಡ ಸಿದ್ಧವಾಗಿದೆ ಎಂದು ಮುನ್ಸೂಚನೆ ನೀಡಿದರು. ಜಿ.ಟಿ.ದೇವೇಗೌಡರೇನು ಲೂಟಿ ಹೊಡೆದಿದ್ದಾರಾ? ಆಗ ಕುಮಾರಸ್ವಾಮಿ ಅವರು ಗುಟುರು ಹಾಕಿ ಎಲ್ಲರನ್ನೂ ಓಡಿಸಿದ್ದರು. ಯಾವ ಕೇಸು ಎಂದು ಈಗಿನ ಆಡಳಿತ ಪಕ್ಷವನ್ನು ಕೇಳಿ ಎಂದು ತಿಳಿಸಿದರು.
ಕುಮಾರಣ್ಣ ಗುಟುರು ಹಾಕದಿದ್ದರೆ ಜಿ.ಟಿ.ದೇವೇಗೌಡರು ನನ್ನ ಹಾಗೆ ಜೈಲಿಗೆ ಹೋಗಬೇಕಿತ್ತು. ಬೇಕಾದರೆ ಯಾವ ದೇವರ ಮುಂದೆಯೂ ಹೇಳುತ್ತೇನೆ. ಜಿ.ಟಿ.ದೇವೇಗೌಡರನ್ನು ಮನವೊಲಿಸಲು ನಮ್ಮ ಪಕ್ಷಕ್ಕೆ ಗೊತ್ತಿದೆ ಎಂದರು.
1989 ರಲ್ಲಿ ದೇವೇಗೌಡರು ನಾನು ಸೋತಿದ್ದೆವು. ದೇವೇಗೌಡರ ರಾಜಕೀಯ ಮುಗಿದೇ ಹೋಯಿತು ಅಂದಿದ್ದರು. ಕೇವಲ ಎರಡು ಸೀಟ್ ಗೆದ್ದಿದ್ದೆವು. ದೇವೇಗೌಡರು ಒಂದೇ ವರ್ಷದ ಒಳಗೆ ಲೋಕಸಭಾ ಸದಸ್ಯರಾದರು. ಏಳು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಇತ್ತು. ಅಂತಹ ಸನ್ನಿವೇಶದಲ್ಲಿ 1994 ರಲ್ಲಿ ದೇವೇಗೌಡರು ಜೆಡಿಎಸ್ ಪಕ್ಷ ಕಟ್ಟಿ 117 ಸೀಟು ಗೆದ್ದು ರಾಜ್ಯದ ಸಿಎಂ ಆದರು. ನಮ್ಮ ಪಕ್ಷ ಹಲವು ಏಳು ಬೀಳು ಕಂಡಿದೆ. ನಮ್ಮ ಪಕ್ಷವನ್ನು ಯಾರಿಗೂ ಮುಗಿಸಲು ಸಾಧ್ಯವಿಲ್ಲವೆಂದು. ರೇವಣ್ಣ ಅವರು ಸಿ.ಪಿ.ಯೋಗೇಶ್ವರ್ಗೆ ತಿರುಗೇಟು ನೀಡಿದರು.