ಬೆಂಗಳೂರು, ನ.27(DaijiworldNews/AA): ಸಚಿವ ಸಂಪುಟ ಪುನಾರಚನೆ ವಿಚಾರ ಸಂಪೂರ್ಣವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಟ್ಟಿರುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಸದಾಶಿವನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಕೆಪಿಸಿಸಿ ಅಧ್ಯಕ್ಷರೊಂದಿಗೆ ಸಮಾಲೋಚನೆ ಮಾಡಿಕೊಂಡು ಮಾಡುವ ಪದ್ಧತಿ ಇದೆ. ಹೈಕಮಾಂಡ್ನೊಂದಿಗೆ ಚರ್ಚೆ ಮಾಡಿ, ಅವರಿಬ್ಬರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದು ನನಗೆ ತಿಳಿದಿಲ್ಲ ಎಂದು ಹೇಳಿದರು.
ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರ ವಿವಾದಾತ್ಮಕ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಂವಿಧಾನದ ಆಶಯಗಳು, ಸಂವಿಧಾನದಲ್ಲಿ ಪ್ರತಿಯೊಂದು ಸಮುದಾಯಗಳಿಗೆ ಮತ್ತು ಧರ್ಮಗಳಿಗೆ ಕೊಟ್ಟಿರುವ ಹಕ್ಕು ಮತ್ತು ಅವಕಾಶಗಳನ್ನು ಅವರು ಸರಿಯಾಗಿ ನೋಡಿಕೊಂಡಿಲ್ಲ. ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅದಕ್ಕೆ ವ್ಯತಿರಿಕ್ತವಾಗಿ ನಾವು ಮಾತನಾಡುವುದಾಗಲಿ ಅಥವಾ ಕ್ರಮ ಮಾಡುವುದು ಸರಿಯಲ್ಲ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಯಾರು ಮಾತನಾಡಬಾರದು ಎಂದರು.