ಮೈಸೂರು, ನ.29(DaijiworldNews/AA): ಸಿಎಂ ವರ್ಚಸ್ಸಿಗೆ ಧಕ್ಕೆ ತಂದು ಅಧಿಕಾರಕ್ಕೆ ಬರುವುದೇ ಬಿಜೆಪಿಯ ಮುಖ್ಯ ಗುರಿ. ಅದಕ್ಕಾಗಿ ಸುಳ್ಳು ಆರೋಪ ಮಾಡಿ ಸರ್ಕಾರ ಅಸ್ಥಿರಗೊಳಿಸುವ ಯತ್ನಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಡಾದಲ್ಲಿ 50:50 ಅನುಪಾತದ ಸೈಟು ಹಂಚಿಕೆಯಲ್ಲಿ ಹಗರಣ ಆಗಿದೆ. ಮೇಲ್ನೋಟಕ್ಕೆ ಹಗರಣದ ಆಗಿದೆ ಎಂದು ಎಲ್ಲರೂ ಮಾತನಾಡುತ್ತಿದ್ದಾರೆ. ತನಿಖೆಯಿಂದ ಎಲ್ಲವೂ ಹೊರಬರಲಿದೆ. ಪ್ರಜಾಪ್ರಭುತ್ವವನ್ನು ಕೊಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಸಿಎಂ ವರ್ಚಸ್ಸಿಗೆ ಧಕ್ಕೆ ತರಲು ಯತ್ನಿಸಿ, ಅವರ ಹೆಸರಿಗೆ ಮಸಿ ಬಳಿಯುವ ಯತ್ನದಲ್ಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಪತ್ನಿಗೆ ಸೇರಿದ ಜಮೀನಿನ ಮೇಲೆ ಮತ್ತೊಂದು ಪ್ರಕರಣ ದಾಖಲು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಪ್ರಕರಣ ಕೋರ್ಟ್ನಲ್ಲಿ ನಿರ್ಧಾರವಾಗುತ್ತಿದೆ. ದೂರುದಾರರು ಇಷ್ಟು ವರ್ಷಗಳು ಸುಮ್ಮನ್ನಿದ್ದು, ಈಗ ಪ್ರಕರಣ ದಾಖಲಿಸಿದ್ದಾರೆ. ತಹಶೀಲ್ದಾರ್ ಮುಂದೆ ಒಪ್ಪಿಗೆ ಸೂಚಿಸಿ ದೇವರಾಜ್ಗೆ ಬರೆದುಕೊಟ್ಟಿದ್ದಾರೆ. ದೇವರಾಜ್ ತಪ್ಪು ಮಾಡಿದ್ದರೆ ಇದು ನಮ್ಮ ತಪ್ಪಲ್ಲ. ಕೋರ್ಟ್ನಲ್ಲಿಯೇ ಎಲ್ಲವೂ ತೀರ್ಮಾನವಾಗುತ್ತದೆ ಎಂದು ಹೇಳಿದರು.
ಸಿಎಂ ರಾಜೀನಾಮೆಗೆ ವಿಪಕ್ಷಗಳ ಒತ್ತಾಯ ವಿಚಾರವಾಗಿ ಮಾತನಾಡಿದ ಅವರು, ರಾಜೀನಾಮೆ ಕೊಡಲು ಕಾರಣ ಇರಬೇಕು. ಸಿಎಂ ತಪ್ಪು ಮಾಡದೆ ಇದ್ದರೂ ತನಿಖಾ ಸಂಸ್ಥೆಯನ್ನ ಬಳಸಿಕೊಂಡು ರಾಜೀನಾಮೆಗೆ ಯತ್ನಿಸುತ್ತಿದ್ದಾರೆ. ಜನರು ಉಪಚುನಾವಣೆಯಲ್ಲಿ ನಮಗೆ ಬೆಂಬಲ ಸೂಚಿಸಿದ್ದಾರೆ. ನಮಗೆ ನೈತಿಕ ಸ್ಥೈರ್ಯ ಸಿಕ್ಕಿದೆ. ಹೀಗಾಗಿ ನಾವು ರಾಜೀನಾಮೆ ಕೊಡಲ್ಲ. ಇನ್ನೂ ನನ್ನ ತಂದೆ, ತಾಯಿ, ಮಾವನ ವಿರುದ್ಧ ಕಾನೂನುಬಾಹಿರವಾಗಿ ಬದಲಿ ಭೂಮಿ ಪಡೆದ ಆರೋಪದಲ್ಲಿ ಯಾವುದೇ ಸತ್ಯ ಇಲ್ಲ. ಇದು ತನಿಖಾ ಸಂಸ್ಥೆಗೂ ಸಹ ತಿಳಿದಿದೆ. ಇಡಿಯಿಂದ ಮುಡಾ ಕ್ಲೀನ್ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಮುಡಾವನ್ನು ಕ್ಲೀನ್ ಮಾಡಲು ಆಯೋಗ ರಚನೆ ಮಾಡಿದ್ದೇವೆ. ಮುಡಾವನ್ನು ಖಂಡಿತ ನಾವೇ ಕ್ಲೀನ್ ಮಾಡುತ್ತೇವೆ ಎಂದು ಕಿಡಿಕಾರಿದ್ದಾರೆ.