ಬೆಂಗಳೂರು,ನ.29(DaijiworldNews/AK): ಬಿಡಿಎ ವಿಷಯದಲ್ಲಿ ಬಿ.ಎಸ್.ವೈ ಪ್ರಾಸಿಕ್ಯೂಶನ್ಗೆ ಕೇಳಿದ್ದೀರಿ. ನಿನ್ನೆ ಸಂಪುಟದಲ್ಲಿ ತೀರ್ಮಾನ ಮಾಡಿದ್ದೀರಿ. ಈ ಕೇಸು ಖುಲಾಸೆ ಆಗಿದೆ. ಆದರೂ ನೀವೇನು ಮಾಡಲು ಹೊರಟಿದ್ದೀರಿ? ಇದು ಬಿಜೆಪಿ ನಾಯಕರ ವಿರುದ್ಧದ ಷಡ್ಯಂತ್ರ ಮತ್ತು ಹಗೆತನದ ರಾಜಕೀಯ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದರು.

ವಿಧಾನಸೌಧದ ಕೊಠಡಿ ಸಂಖ್ಯೆ 155 ರಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮ್ಮ ಸರಕಾರದ ಅಬಕಾರಿ ಸಚಿವರ ವಿರುದ್ಧ ಆರೋಪಗಳಿವೆ. ವಿಡಿಯೋಗಳು, ಆಡಿಯೋಗಳೂ ಬಂದಿವೆ. ನೀವೇನು ಮಾಡಿದ್ದೀರಿ? ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದ್ದೀರಿ. ಸಂಘಟನೆಗಳು 700 ಕೋಟಿ ಲಂಚ ಸಂಗ್ರಹ ಸಂಬಂಧ ಸಚಿವ ತಿಮ್ಮಾಪುರ ಅವರ ವಿರುದ್ಧ ಆಪಾದನೆ ಮಾಡಿವೆ. 700 ಕೋಟಿ ಲಂಚದ ಹಗರಣ ಇದ್ದರೂ ಕೂಡ ನೀವು ಅವರನ್ನು ರಕ್ಷಿಸುತ್ತೀರಿ. ಅಮಾನತಾದ ಅಧಿಕಾರಿಗಳು ಯಾರ ಏಜೆಂಟರು ಎಂದು ತಿಳಿಸಲು ಆಗ್ರಹಿಸಿದರು.
ಅವರು ಸಚಿವರ ಏಜೆಂಟರೇ? ಅಥವಾ ಮುಖ್ಯಮಂತ್ರಿಗಳ ಏಜೆಂಟರಾಗಿದ್ದರೇ? ಅವರ ತಲೆದಂಡ ಮಾತ್ರ ಯಾಕೆ? ಸಚಿವರ ತಲೆದಂಡ ಯಾಕಾಗಬಾರದು ಎಂದು ಪ್ರಶ್ನೆಗಳನ್ನು ಮುಂದಿಟ್ಟರು. ಅವರನ್ನು ಸರಕಾರ ಯಾಕೆ ರಕ್ಷಣೆ ಮಾಡುತ್ತಿದೆ ಎಂದು ಕೇಳಿದರು.
ದಿನೇಶ್ ಗುಂಡೂರಾವ್ ವಜಾ ಮಾಡಿ
ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಸಂಭವಿಸಿದೆ. ದಿನೇಶ್ ಗುಂಡೂರಾವ್ ಅವರು ಆರೋಗ್ಯ ಸಚಿವರಾಗಲು ಯೋಗ್ಯರೇ? ಅವರೇನು ವೈದ್ಯರೇ? ಎಂಬಿಬಿಎಸ್ ಓದಿದವರೇ? ಪಿಎಚ್ಡಿ ಆಗಿದೆಯೇ? ಎಂದು ಕೇಳಿದರು. ದನಕರುಗಳಿಗೆ ಕೊಡುವ ಔಷಧಿಗಳು ಆಸ್ಪತ್ರೆಗೆ ಸರಬರಾಜಾದ ಬಗ್ಗೆ ಸದನದಲ್ಲಿ ಕೇಳಿದ್ದೆವು. ಅದು ಮುದ್ರಣದ ತಪ್ಪು ಎಂದಿದ್ದರು. ಬಳಿಕ ವರದಿ ಬಂದಾಗ ಅದಾಗಿದ್ದು ನಿಜ; ವಿಷಯ ತಿಳಿದು ವಾಪಸ್ ಕಳಿಸಿದ್ದಾಗಿ ಹೇಳಿದ್ದರು ಎಂದು ಛಲವಾದಿ ನಾರಾಯಣಸ್ವಾಮಿ ಅವರು ವಿವರಿಸಿದರು.
ಯಾದಗಿರಿಯಲ್ಲಿ ವೆಟರ್ನರಿ ಔಷಧಿ ಆಸ್ಪತ್ರೆಗೆ ಸರಬರಾಜಾಗಿದೆ. ಬಾಣಂತಿಯರಿಗೆ ಕೊಟ್ಟ ಔಷಧಿ ಕಳಪೆ ಆಗಿದ್ದುದಲ್ಲದೇ, ಕೊಟ್ಟ ದ್ರಾವಣಗಳು ಕಳಪೆ ಎಂದು ವರದಿ ಬರುತ್ತಿದೆ. ಹೀಗಿದ್ದರೂ ಅವರನ್ನು ಬದಲಿಸಿಲ್ಲ; ಇದು ಜೀವಗಳ ಜೊತೆ ಆಟ. ದಿನೇಶ್ ಗುಂಡೂರಾವ್ ಅವರನ್ನು ತಕ್ಷಣ ವಜಾ ಮಾಡಬೇಕೆಂದು ಆಗ್ರಹಿಸಿದರು.
ಒಂದು ವಿಶ್ವವಿದ್ಯಾಲಯದ ಕುಲಾಧಿಪತಿ ಸ್ಥಾನಕ್ಕೆ ಮುಖ್ಯಮಂತ್ರಿಗಳು ಗೌರವಾನ್ವಿತ ರಾಜ್ಯಪಾಲರಿಗೆ ಕೊಕ್ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳೇ, ನೀವು ಸರ್ವಾಧಿಕಾರಿ ಧೋರಣೆ ಮಾಡಲು ಹೊರಟಿದ್ದೀರಾ ಎಂದು ಪ್ರಶ್ನಿಸಿದರು. ನಿಮ್ಮ ಮೇಲೆ ಭ್ರಷ್ಟಾಚಾರದ ಹಲವಾರು ಆರೋಪಗಳಿವೆ. ಕುಲಾಧಿಪತಿ ಸ್ಥಾನಕ್ಕೆ ಗವರ್ನರ್ ಯೋಗ್ಯರೆಂದು ಸಾಂವಿಧಾನಿಕ ಹುದ್ದೆಯಾಗಿ ಕೊಡಲಾಗಿತ್ತು. ಈಗ ಅದನ್ನು ವಾಪಸ್ ಪಡೆಯುವ ಮೂಲಕ ಕುಲಾಧಿಪತಿ ಆಗಲು ಹೊರಟಿದ್ದೀರಿ. ಭ್ರಷ್ಟಾಚಾರದಿಂದ ನಿಮ್ಮ ಸರಕಾರ ಕುಲಗೆಟ್ಟಿದ್ದು, ಕುಲಾಧಿಪತಿ ಸ್ಥಾನಕ್ಕೆ ಮುಖ್ಯಮಂತ್ರಿ ಯೋಗ್ಯರೇ ಎಂದು ಕೇಳಿದರು.