ಹುಬ್ಬಳ್ಳಿ, ನ.30(DaijiworldNews/AA): ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ದದ ಪ್ರಕರಣದ ತನಿಖೆ ದ್ವೇಷ ರಾಜಕಾರಣ ಅಲ್ಲ ಎಂದ ಅವರು, ಮೂರು ಉಪ ಚುನಾವಣೆಗಳ ಗೆಲುವು ಬಿಜೆಪಿಗೆ ಕಪಾಳ ಮೋಕ್ಷ ಮಾಡಿದಂತಾಗಿದೆ. ಬಿಜೆಪಿಯವರು ಇಲ್ಲಸಲ್ಲದ ಆರೋಪಗಳೊಂದಿಗೆ ಸಿಎಂ ಬಲಹೀನಗೊಳಿಸುವ ಯತ್ನ ಮಾಡಿದರು ಎಂದು ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.

ನ.30ರಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ನಾಯಕರ ಬಗ್ಗೆ ತೇಜೋವಧೆ ಹಾಗೂ ಸರ್ಕಾರ ಅಭದ್ರಕ್ಕೆ ಯತ್ನಿಸಿದರೆ ನಾವು ಒಟ್ಟಾಗಿ ಎದುರಿಸುತ್ತೇವೆ. ಹಾಸನದ ಸ್ವಾಭಿಮಾನ ಸಮಾವೇಶಕ್ಕೆ ಯಾರೋ ಸೃಷ್ಟಿ ಮಾಡಿದ ಅನಾಮಧೇಯ ಪತ್ರ ನಾವು ಒಪ್ಪುವುದಿಲ್ಲ. ಕಾಂಗ್ರೆಸ್ ಪಕ್ಷದ ಮುಂದಾಳತ್ವದಲ್ಲಿ ಸಮಾವೇಶ ಯಶಸ್ವಿಗೊಳಿಸುತ್ತೇವೆ ಎಂದು ತಿಳಿಸಿದರು.
ಸಂಪುಟ ಪುನರ್ರಚನೆ, ಅಥವಾ ವಿಸ್ತರಣೆ ಬಗ್ಗೆ ಪಕ್ಷದ ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ಹಿರಿಯ-ಕಿರಿಯ ಸಚಿವರೆಲ್ಲರು ಒಪ್ಪಿಕೊಳ್ಳಬೇಕು ಎಂದ ಅವರು, ಸಿಎಂ ಬದಲಾವಣೆ ಬಗ್ಗೆ ಶಾಸಕ ಬಿ.ಆರ್.ಪಾಟೀಲ ಹೇಳಿಕೆ ಬಗ್ಗೆ ಮಾಹಿತಿ ಇಲ್ಲ. ಅವರು ಪ್ರಬುದ್ಧ ರಾಜಕಾರಣಿ, ಸಿಎಂ ಸಲಹೆಗಾರರು ಕೂಡ. ಈ ವಿಷಯದ ಬಗ್ಗೆ ನಾನು ಸಾರ್ವಜನಿಕವಾಗಿ ಚರ್ಚಿಸುವುದಿಲ್ಲ ಎಂದರು.