ಕಲಬುರಗಿ, ನ.30(DaijiworldNews/AA): ನಿಜವಾಗಿಯೂ ತಾಕತ್ತಿದ್ದರೆ ಮೊದಲು ಬಸನಗೌಡ ಪಾಟೀಲ್ ಯತ್ನಾಳ್ರನ್ನ ಪಕ್ಷದಿಂದ ಉಚ್ಚಾಟಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಎರಡು ಬಣಗಳ ಮಧ್ಯೆ ಫೈಟ್ ನಡೆದಿದೆ. ಮೇಲಾಗಿ ಬಿಜೆಪಿ ಕಾರ್ಯಕರ್ತರೇ ಯತ್ನಾಳ್ ಅರೆಹುಚ್ಚ ಅಂದಿದ್ದಾರೆ. ಇಷ್ಟಾದರೂ ಅವರನ್ನ ಏಕೆ ಪಕ್ಷದಿಂದ ಉಚ್ಚಾಟಿಸುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ರಾಜ್ಯ ಸಚಿವ ಸಂಪುಟದ ಪುನಾರಚನೆ ಸದ್ಯಕ್ಕೆ ಮಾಡುತ್ತಿಲ್ಲ. ಸಿದ್ದರಾಮಯ್ಯ ಅವರು ಸಚಿವ ಸಂಪುಟ ಪುನಾರಚನೆ ಕುರಿತು ಚರ್ಚಿಸಲು ದೆಹಲಿಗೆ ಹೋಗಿರಲಿಲ್ಲ. ಪ್ರಿಯಾಂಕಾ ಗಾಂಧಿ ಇತ್ತೀಚೆಗೆ ನೂತನ ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರಿಗೆ ಶುಭಾಶಯ ಕೋರಲು ತೆರಳಿದ್ದರು. ಈ ವೇಳೆ ಸಿಎಂ ಎಐಸಿಸಿ ಅಧ್ಯಕ್ಷರನ್ನು ಸಹಜವಾಗಿ ಭೇಟಿಯಾಗಿದ್ದಾರೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.